ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ ಬಳಿ ಪ್ರಯಾಣಿಕರ ದಟ್ಟಣೆ ತಪ್ಪಿಸಲು ಹಾಗೂ ಕೇಶ್ವಾಪುರ ಮತ್ತು ಗದಗ ರಸ್ತೆಯ ಭಾಗದ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಹೋಗಿಬರಲು ಅನುಕೂಲವಾಗಲು ಗದಗ ರಸ್ತೆಯ ನೈಋತ್ಯ ರೈಲ್ವೆ ಕೇಂದ್ರೀಯ ರೈಲ್ವೆ ಆಸ್ಪತ್ರೆ ಎದುರು ಎರಡನೇ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದ್ದು, ಸೆಪ್ಟೆಂಬರ್‌ದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ.
ಕೇಶ್ವಾಪುರ ಪ್ರದೇಶ ಮತ್ತು ಗದಗ ರಸ್ತೆ ಭಾಗದ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ನೇರವಾಗಿ ತೆರಳಲು ಸುಮಾರು 3.35 ಕೋಟಿ ರೂ. ವೆಚ್ಚದಲ್ಲಿ ಅಂದಾಜು 200 ಮೀಟರ್ ಉದ್ದದ ಪಾದಚಾರಿ ಮೇಲ್ಸೇತುವೆ ಮಾರ್ಗ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯನ್ನು ಹುಬ್ಬಳ್ಳಿಯ ದುರ್ಗಾ ವೆಲ್ಡಿಂಗ್ ವರ್ಕ್ಸ್ ಕಂಪನಿ ಗುತ್ತಿಗೆ ಪಡೆದಿದೆ. ಈ ಪಾದಚಾರಿ ಮೇಲ್ಸೇತುವೆ ಮಾರ್ಗ ರೈಲ್ವೆ ನಿಲ್ದಾಣದ 5ನೇ ಪ್ಲಾಟ್ಫಾರ್ಮ್ಗೆ ನೇರವಾಗಿ ಸಂಪರ್ಕ ಕಲ್ಪಿಸುತ್ತದೆ.
ದಟ್ಟಣೆ ತಗ್ಗಿಸಲು ಕ್ರಮ: ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವೇಶದ್ವಾರ ಬಳಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಅಲ್ಲದೆ ಕೇಶ್ವಾಪುರ ಮತ್ತು ಗದಗ ರಸ್ತೆಯ ಪ್ರದೇಶದ ಜನರು ಈಗಿರುವ ಪ್ರವೇಶ ದ್ವಾರಕ್ಕೆ ಬರಲು ಸುಮಾರು ಅರ್ಧ ಕಿಮೀ ಸುತ್ತುವರಿದುಕೊಂಡು ನಿಲ್ದಾಣಕ್ಕೆ ಬರಬೇಕಾಗಿದೆ. ಈ ವೇಳೆ ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರ ದಟ್ಟಣೆಯಿಂದಾಗಿ ಹಲವು ಬಾರಿ ಪ್ರಯಾಣಿಕರು ರೈಲು ತಪ್ಪಿಸಿಕೊಂಡು ಪ್ರಯಾಣ ಮೊಟಕುಗೊಳಿಸಿದ ಇಲ್ಲವೆ ಬಸ್ ಮೂಲಕ ಪ್ರಯಾಣಿಸಿದ್ದು ಉಂಟು.
ಗದಗ ರಸ್ತೆ ಹಾಗೂ ಕೇಶ್ವಾಪುರ ಭಾಗದ ಜನರು ಗದಗ ರಸ್ತೆಯ ಕಡೆ ಪ್ರವೇಶದ್ವಾರ ನಿರ್ಮಿಸಿ ಸಂಚಾರ ದಟ್ಟಣೆ ತಾಪತ್ರಯ ತಪ್ಪಿಸಬೇಕೆಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರು, ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಹಾಗೂ ಧಾರವಾಡ ಸಂಸದರಿಗೆ ಹಲವು ಬಾರಿ ಮನವಿ ಕೂಡ ಮಾಡಿದ್ದರು. ಈಗ ಗದಗ ರಸ್ತೆಯ ರೈಲ್ವೆ ಇಲಾಖೆಯ ಕೇಂದ್ರೀಯ ಆಸ್ಪತ್ರೆ ಎದುರು ಎರಡನೇ ಪ್ರವೇಶ ದ್ವಾರ ನಿರ್ಮಾಣವಾಗುತ್ತಿದೆ.
ಪಾರ್ಕಿಂಗ್-ವಿಶ್ರಾಂತಿ ಸೌಲಭ್ಯ: ನೂತನವಾಗಿ ನಿರ್ಮಾಣವಾಗುತ್ತಿರುವ 2ನೇ ಪ್ರವೇಶ ದ್ವಾರ ಬಳಿಯೇ ಅಂದಾಜು 100 ಚದುರಡಿಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಇಲ್ಲಿ ಟಿಕೆಟ್ ಕೌಂಟರ್, ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ವಿಶ್ರಾಂತಿ ಕೊಠಡಿ ಆರಂಭಿಸಲಾಗುತ್ತದೆ. ಪ್ರಯಾಣಿಕರು ಇಲ್ಲಿಂದಲೇ ತಾವು ಪ್ರಯಾಣಿಸಲಿರುವ ಸ್ಥಳಕ್ಕೆ ಟಿಕೆಟ್ ಪಡೆದುಕೊಳ್ಳಬಹುದು. ಎರಡನೇ ಪ್ರವೇಶ ದ್ವಾರದಲ್ಲಿ ವಾಹನಗಳು ಆಗಮಿಸಲು ಮತ್ತು ತೆರಳಲು ಪ್ರತ್ಯೇಕವಾಗಿ ದ್ವಾರ ನಿರ್ಮಿಸಲಾಗಿದೆ. ಪ್ರವೇಶ ದ್ವಾರದ ಎರಡು ಬದಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ನಿಲ್ಲಲು ಸ್ಥಳಾವಕಾಶ ಕಲ್ಪಿಸಲಾಗಿದೆ.
•ಶಿವಶಂಕರ ಕಂಠಿ