Advertisement

2G Scam :ರಾಜಾ,ಕನಿಮೋಳಿ ಸೇರಿ ಎಲ್ಲಾ 17 ಆರೋಪಿಗಳು ಖುಲಾಸೆ!!

10:59 AM Dec 21, 2017 | Team Udayavani |

ಹೊಸದಿಲ್ಲಿ: ದೇಶದಲ್ಲೇ ಭಾರಿ ಸಂಚಲನ ಮೂಡಿಸಿದ್ದ 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣ ಕುರಿತ ಮಹತ್ವದ ಅಂತಿಮ ತೀರ್ಪನ್ನು ಗುರುವಾರ ಸಿಬಿಐ ಕೋರ್ಟ್‌ ಪ್ರಕಟಿಸಿದ್ದು, ಕೇಂದ್ರದ ಮಾಜಿ ಟೆಲಿಕಾಂ ಸಚಿವ ಎ. ರಾಜಾ, ರಾಜ್ಯ ಸಭಾ ಸಂಸದೆ ಕನಿಮೋಳಿ ಸೇರಿದಂತೆ ಎಲ್ಲಾ 17 ಮಂದಿ  ಆರೋಪಿಗಳನ್ನು ಪಟಿಯಾಲ ಹೌಸ್‌ನ ವಿಶೇಷ ಕೋರ್ಟ್‌ ಖುಲಾಸೆಗೊಳಿಸಿದೆ. 

Advertisement

ಆರೋಪಿಗಳ ವಿರುದ್ಧ ಯಾವುದೇ ಆರೋಪವನ್ನು ಸಾಬೀತು ಪಡಿಸಲು ವಿಫ‌ಲವಾಗಿರುವ ಕಾರಣ  ಎಲ್ಲಾ ಆರೋಪಿಗಳನ್ನು ಖುಲಾಸೆ ಗೊಳಿಸುತ್ತಿರುವುದಾಗಿ ವಿಶೇಷ ಕೋರ್ಟ್‌ನ ನ್ಯಾಯಮೂರ್ತಿ ಓ.ಪಿ.ಸೈನಿ ಅವರು ತೀರ್ಪು ಪ್ರಕಟಿಸಿರುವ ಬಗ್ಗೆ ವರದಿಯಾಗಿದೆ. 

ಜಾರಿ ನಿರ್ದೇಶನಾಲಯದ ಒಂದು ಪ್ರಕರಣ ಮತ್ತು ಸಿಬಿಐನ 2 ಪ್ರಕರಣಗಳ ಕುರಿತಾಗಿ  ಕೋರ್ಟ್‌ ಈ ಅಂತಿಮ ತೀರ್ಪು ನೀಡಿದೆ. 

ಖುಲಾಸೆ ಗೊಂಡ ಇತರ ಪ್ರಮುಖರೆಂದರೆ ಮಾಜಿ ಟೆಲಿಕಾಂ ಕಾರ್ಯದರ್ಶಿ ಸಿದ್ದಾರ್ಥ ಬೆಹುರಾ, ರಾಜಾ ಅವರ ಹಿಂದಿನ ಖಾಸಗಿ ಕಾರ್ಯದರ್ಶಿ ಆರ್.ಕೆ.ಚಂದೋಲಿಯಾ, ಸ್ವಾನ್ ಟೆಲಿಕಾಂ ಪ್ರವರ್ತಕರಾದ ಶಾಹಿದ್ ಉಸ್ಮಾನ್ ಬಲ್ವಾ ಮತ್ತು ವಿನೋದ್ ಗೋಯೆಂಕಾ, ಯೂನಿಟೆಕ್ ಲಿಮಿಟೆಡ್ ಎಂಡಿ ಸಂಜಯ್ ಚಂದ್ರ, ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ನ ಮೂರು ಉನ್ನತ ಅಧಿಕಾರಿಗಳಾದ ಗೌತಮ್ ದೋಷಿ, ಸುರೇಂದ್ರ ಪಿಪಾರ ಮತ್ತು ಹರಿ ನಾಯರ್.  ಕುಸೆಗಾಂವ್ ಹಣ್ಣುಗಳು ಮತ್ತು ತರಕಾರಿಗಳು ಖಾಸಗಿ  ನಿಯಮಿತದ ನಿರ್ದೇಶಕರಾದ ಆಸಿಫ್ ಬಲ್ವಾ ಮತ್ತು ರಾಜೀವ್ ಅಗರ್ವಾಲ್, ಕಲೈಂಗರ್ ಟಿವಿ ನಿರ್ದೇಶಕ ಶರದ್ ಕುಮಾರ್ ಮತ್ತು ಬಾಲಿವುಡ್ ನಿರ್ಮಾಪಕ ಕರೀಮ್ ಮೊರಾನಿ ಅವರು ಖುಲಾಸೆಗೊಂಡಿದ್ದಾರೆ. 

ಡಿಎಂಕೆಗೆ ಐತಿಹಾಸಿಕ ದಿನ 
ಕೋರ್ಟ್‌ ತೀರ್ಪಿನ ಬಳಿಕ ನಗುನಗುತ್ತಾ ಸುದ್ದಿಗಾರೊಂದಿಗೆ ಮಾತನಾಡಿದ ಕರುಣಾನಿಧಿ ಪುತ್ರಿ ಕನಿಮೋಳಿ ‘ತೀರ್ಪು ಪಕ್ಷದ ಪಾಲಿಕೆ ಐತಿಹಾಸಿಕ ದಿನವಾಗಿದ್ದು, ಆರೋಪ ಬಂದಾಗ ನಮ್ಮ ಬೆನ್ನಿಗೆ ನಿಂತವರಿಗೆ ಧನ್ಯವಾದಗಳು’ ಎಂದರು. 

Advertisement

ತಮಿಳುನಾಡಿನ ಚೆನ್ನೈ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಡಿಎಂಕೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. 

ಮೇಲ್ಮನವಿ ಸಲ್ಲಿಸಲಿ  

ವಿಶೇಷ ಕೋರ್ಟ್‌ನ ತೀರ್ಪಿನ ವಿರುದ್ಧ ಸಿಬಿಐ  ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕೆಂದು ಬಿಜೆಪಿ ನಾಯಕಸುಬ್ರಹ್ಮಣ್ಯನ್‌ ಸ್ವಾಮಿ ಮನವಿ ಮಾಡಿದ್ದಾರೆ. 

ಯುಪಿಎ ಸರ್ಕಾರದ ಅವಧಿಯಲ್ಲಿ ಮಹಾಲೇಖಪಾಲರು (ಸಿಎಜಿ) ಬಯಲಿಗೆಳೆದಿದ್ದ 1.76 ಲಕ್ಷ ಕೋಟಿ ರೂ. ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣ ದೇಶವನ್ನೇ ಬೆಚ್ಚಿಬೀಳಿಸಿತ್ತು.

ಕೋರ್ಟ್‌ನ ತೀರ್ಪು ತಮಿಳು ನಾಡು ರಾಜಕಾರಣದಲ್ಲಿ ಭಾರೀ ಬದಲಾವಣೆ ತರುವ ಸಾಧ್ಯತೆಗಳಿವೆ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next