Advertisement

2ಜಿ, ಮಾಯಾವತಿ ಪ್ರಕರಣ: ಗಮನಾರ್ಹ ತೀರ್ಪುಗಳು 

12:30 AM Feb 11, 2019 | |

ನ್ಯಾಯಾಲಯಗಳು ಕೆಲ ದಿನಗಳ ಹಿಂದೆ ನೀಡಿರುವ ಎರಡು ತೀರ್ಪುಗಳು ಗಮನ ಸೆಳೆದಿವೆ.ಒಂದು 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದ ತೀರ್ಪಾಗಿದ್ದರೆ ಇನ್ನೊಂದು ಬಹುಜನ ಸಮಾಜ ಪಕ್ಷದ ಪರಮೋತ್ಛ ನಾಯಕಿ ಮಾಯಾವತಿ ತಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ತನ್ನದೇ ಪ್ರತಿಮೆಗಳನ್ನು ಮತ್ತು ಪಕ್ಷದ ಚಿಹ್ನೆಯಾದ ಆನೆಯ ಪ್ರತಿಮೆಗಳನ್ನು ಸ್ಥಾಪಿಸಿದ ಹಗರಣಕ್ಕೆ ಸಂಬಂಧಿಸಿದ್ದು. ಪ್ರಚಲಿತ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯಲ್ಲಿ ಈ ಎರಡು ತೀರ್ಪುಗಳಿಗೆ ಬಹಳ ಮಹತ್ವವಿದೆ. 

Advertisement

2ಜಿ ಹಗರಣದಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪಿನಲ್ಲಿ ದಿಲ್ಲಿ ಹೈಕೋರ್ಟ್‌ ಇಬ್ಬರು ಆರೋಪಿಗಳು ಮತ್ತು ಮೂರು ಕಂಪನಿಗಳಿಗೆ 15 ಸಾವಿರ ಗಿಡ ನೆಡಲು ಆದೇಶಿಸಿದೆ. ಅರ್ಜಿಗೆ ಪ್ರತಿಕ್ರಿಯಿಸಲು ವಿಳಂಬಿಸಿದ್ದಕ್ಕೆ ನ್ಯಾಯಾಲಯ ನೀಡಿರುವ ಶಿಕ್ಷೆಯಿದು. ಪರಿಸರದ ದೃಷ್ಟಿಯಿಂದ ಮಾತ್ರವಲ್ಲದೆ ನ್ಯಾಯಾಂಗ ಕಲಾಪಗಳನ್ನು ವಿಳಂಬ ಮಾಡುವ ಚಾಳಿಯನ್ನು ತಪ್ಪಿಸುವ ದೃಷ್ಟಿಯಿಂದಲೂ ಈ ತೀರ್ಪು ಸ್ವಾಗತಾರ್ಹವಾಗಿದೆ. ತೀರ್ಪು ನೀಡಿರುವ ನ್ಯಾಯಮೂರ್ತಿ ನಜಿಮಿ ವಜಿರಿ ಅವರು ಈ ನೆಲೆಯಲ್ಲಿ ಅಭಿನಂದನಾರ್ಹರಾಗುತ್ತಾರೆ. 

ಆರೋಪಿಗಳಾದ ಡಿಎಂಕೆಯ ಕನಿಮೋಳಿ ಮತ್ತು ಎ.ರಾಜಾ ತಲಾ ಮೂರು ಸಾವಿರ ಗಿಡಗಳನ್ನು ಅಂತೆಯೇ ಮೂರು ಕಂಪೆನಿಗಳು ತಲಾ ಮೂರು ಸಾವಿರ ಗಿಡಗಳನ್ನು ನೆಡಬೇಕು. 15 ಸಾವಿರ ಗಿಡಗಳನ್ನು ನೆಟ್ಟು ನ್ಯಾಯಾಲಯದ ಕಟ್ಟುನಿಟ್ಟಿನ ನಿರ್ದೇಶನದಂತೆ ಪೋಷಿಸಿದರೆ ಅದೊಂದು ಚಿಕ್ಕ ಕಾಡೇ ಆಗುತ್ತದೆ. ಇದು ಪರಿಸರ ಸಂರಕ್ಷಣೆಗೆ ನೀಡುವ ದೊಡ್ಡ ಕೊಡುಗೆಯೂ ಹೌದು. ಎಲ್ಲವನ್ನೂ ಸರಕಾರವೇ ಮಾಡಬೇಕೆಂಬ ಸಾರ್ವತ್ರಿಕ ಧೋರಣೆಯಿರುವ ಸಂದರ್ಭದಲ್ಲಿ ನ್ಯಾಯಾಲಯವೂ ಈ ಮೂಲಕ ಪರಿಸರದ ಉಳಿವಿಗೆ ಕೈಜೋಡಿಸಿರುವುದು ಉತ್ತಮ ನಡೆ. 

ಇಷ್ಟು ಮಾತ್ರವಲ್ಲದೆ ಹೀಗೆ ವಿಚಾರಣೆಗೆ ಹಾಜರಾಗದೆ, ಪ್ರತಿಕ್ರಿಯೆ ನೀಡದೆ ನ್ಯಾಯಾಂಗದ ಸಮಯವನ್ನು ವ್ಯರ್ಥಗೊಳಿಸುತ್ತಿರುವವರಿಗೂ ಇದೊಂದು ಪಾಠವಾಗಬೇಕಿದೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ನ್ಯಾಯಾಲಯ ಆರೋಪಿಗಳಿಗೆ ಛೀಮಾರಿ ಹಾಕುವುದು ಅಥವಾ ದಂಡ ಹಾಕುವಂಥ ಕ್ರಮಗಳನ್ನು ಅನುಸರಿಸುತ್ತದೆ. ಪ್ರಕರಣವನ್ನು ದೀರ್ಘ‌ ಕಾಲ ಎಳೆದುಕೊಂಡು ಹೋಗಬೇಕೆಂದು ನಿರ್ಧರಿಸಿರುವ ಆರೋಪಿಗಳಿಗೆ ಈ ದಂಡವಾಗಲಿ, ಛೀಮಾರಿಯಾಗಲಿ ನಾಟುವುದಿಲ್ಲ. ಅದರಲ್ಲೂ ಕನಿಮೋಳಿ, ರಾಜಾ ಅವರಂಥ ಕೋಟ್ಯಧಿಪತಿಗಳಿಗೆ ಜುಜುಬಿ ಮೊತ್ತದ ದಂಡ ಯಾವ ಲೆಕ್ಕಕ್ಕೂ ಸಿಗುವುದಿಲ್ಲ.ಹೀಗಿರುವಾಗ ಗಿಡ ನೆಡುವಂಥ ಪ್ರಕೃತಿ ಸಂರಕ್ಷಿಸುವ ಅಥವಾ ಸಾಮಾಜಿಕವಾಗಿ ಉಪಕಾರಿಯಾಗುವಂಥ ಸತ್ಕಾರ್ಯಗಳನ್ನು ಮಾಡಲು ಹೇಳುವುದು ನಿಜವಾದ ಅರ್ಥದಲ್ಲಿ ಪರಿಣಾಮಕಾರಿಯಾಗ ಬಲ್ಲದು. ಎಲ್ಲ ನ್ಯಾಯಾಲಯಗಳಿಗೆ ಮೇಲ್ಪಂಕ್ತಿಯಾಗುವಂಥ ಶಿಕ್ಷೆಯನ್ನು ನ್ಯಾ| ನಜಿಮಿ ವಜಿರಿ ನೀಡಿದ್ದಾರೆ.
 
ಇನ್ನು ಮಾಯಾವತಿಯ ಪ್ರಕರಣದಲ್ಲಿ ಜನರ ತೆರಿಗೆ ಹಣವನ್ನು ಸ್ವಂತ ದುಡ್ಡು ಎಂಬಂತೆ ಅಂಧಾದುಂಧಿಯಾಗಿ ಖರ್ಚು ಮಾಡುವ ರಾಜಕಾರಣಿಗಳಿಗೊಂದು ಎಚ್ಚರಿಕೆಯ ಪಾಠವಿದೆ.ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಯಾವತಿ ಲಕ್ನೊ ಮತ್ತು ನೋಯ್ಡಾದ ಸಾರ್ವಜನಿಕ ಉದ್ಯಾನಗಳಲ್ಲಿ ತನ್ನ ಮತ್ತು ಪಕ್ಷದ ಚಿಹ್ನೆಯಾದ ಆನೆಯ ಹಲವು ಪ್ರತಿಮೆಗಳನ್ನು ಸ್ಥಾಪಿಸಿದ್ದರು. ಆಗಲೇ ಇದು ಜನರ ತೆರಿಗೆ ಹಣದ ದುರುಪಯೋಗ ಎಂಬ ಆರೋಪಕ್ಕೊಳಗಾಗಿತ್ತು. ಅನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಇದೀಗ ಸುಪ್ರೀಂ ಕೋರ್ಟ್‌ ಮೌಖೀಕವಾಗಿ, ಮಾಯಾವತಿ ಪ್ರತಿಮೆಗಳಿಗೆ ವೆಚ್ಚ ಮಾಡಿದ ಹಣವನ್ನು ಮರುಪಾವತಿಸಬೇಕಾಗಬಹುದು ಎಂದು ಹೇಳಿದೆ. 2008ರಿಂದ 2010ರ ನಡುವೆ ಮಾಯಾವತಿ ಸುಮಾರು 2000 ಕೋ. ರೂ. ಗಳನ್ನು ಬರೀ ಪ್ರತಿಮೆಗಳ ನಿರ್ಮಾಣಕ್ಕಾಗಿಯೇ ಖರ್ಚು ಮಾಡಿದ್ದಾರೆ ಎಂಬ ಆರೋಪವಿದೆ. ಅಧಿಕಾರ ಹೆಚ್ಚಿದಷ್ಟೂ ಅದರ ದುರಪಯೋಗವೂ ಹೆಚ್ಚುತ್ತದೆ ಎಂಬ ಮಾತಿನಂತೆ ತನ್ನ ಪರಮಾಧಿಕಾರ ನಡೆಯುತ್ತಿರುವಾಗ ಯಾವ ಟೀಕೆಗಳಿಗೂ ಕ್ಯಾರೇ ಎನ್ನದೆ ಮಾಯಾವತಿ ಮಾಡಿದ ಖರ್ಚು ಇದು. 
ಸ್ವ ವೈಭವೀಕರಣಕ್ಕಾಗಿ ಸರಕಾರಿ ಬೊಕ್ಕಸದ ಹಣವನ್ನು ಹೀಗೆ ನೀರಿನಂತೆ ಖರ್ಚು ಮಾಡಿದ ಬೇರೊಬ್ಬ ಮುಖ್ಯಮಂತ್ರಿಯಿರಲಿಕ್ಕಿಲ್ಲ. 

ಚುನಾವಣೆ ಕಾಲದಲ್ಲಿ ಈ ತೀರ್ಪು ಮಾಯಾವತಿಯ ರಾಜಕೀಯ ವರ್ಚಸ್ಸಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಇದಕ್ಕೂ ಮುಖ್ಯವಾಗಿ ಅಧಿಕಾರದಲ್ಲಿರುವವರು ತಮ್ಮ ಕೃತ್ಯಗಳಿಗೆ ಒಂದಲ್ಲ ಒಂದು ದಿನ ಉತ್ತರದಾಯಿಗಳಾಗಲೇ ಬೇಕೆಂಬ ಎಚ್ಚರಿಕೆ ತೀರ್ಪಿನಲ್ಲಿ ಇದೆ. ಮಾಯಾವತಿ ಎಲ್ಲ ಹಣವನ್ನು ಬೊಕ್ಕಸಕ್ಕೆ ಮರಳಿಸುತ್ತಾರೋ ಇಲ್ಲವೋ ಎನ್ನುವುದು ಬೇರೆ ಪ್ರಶ್ನೆ. ಆದರೆ ಸಾರ್ವಜನಿಕ ಹಣವನ್ನು ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಖರ್ಚು ಮಾಡುವ ರಾಜಕೀಯ ನಾಯಕರಿಗೆ ಈ ಮೂಲಕ ನ್ಯಾಯಾಲಯ ಸರಿಯಾಗಿಯೇ ಚಾಟಿ ಬೀಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next