ಕಾಸರಗೋಡು: ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ 292 ಮಂದಿಗೆ ಕೋವಿಡ್ ಜೆಎನ್.1 ಖಾತರಿಪಡಿಸಲಾಗಿದೆ. ಇದರೊಂದಿಗೆ ಕೇರಳದಲ್ಲಿ ಈ ವರೆಗೆ 2,051 ಮಂದಿಗೆ ಕೋವಿಡ್ ಜೆಎನ್.1 ಪತ್ತೆಯಾಗಿದೆ.
ಕೇರಳದಲ್ಲಿ ಕೊರೊನಾ ರೂಪಾಂತರಿ ವೈರಸ್ ಜೆಎನ್.1 ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿದೆ. ದೇಶದಲ್ಲೇ ಅತೀ ಹೆಚ್ಚು ಕೋವಿಡ್ ಸೋಂಕು ತಪಾಸಣೆ ನಡೆಯುತ್ತಿರುವ ರಾಜ್ಯ ಕೇರಳವಾಗಿದೆ.
ಹೆಚ್ಚು ಪರೀಕ್ಷೆ ನಡೆಸಿದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಸಹಜ. ಆದ ಕಾರಣ ಯಾರೂ ಹೆಚ್ಚಿನ ಆತಂಕ ಪಡುವ ಅಗತ್ಯವಿಲ್ಲವೆಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡು ಬಂದರೆ ತತ್‌ಕ್ಷಣ ವೈದ್ಯರ ಸಲಹೆ ಪಡೆಯುವಂತೆ ತಿಳಿಸಿದ್ದಾರೆ.
ಕೊಡಗಿನ ಗಡಿಯಲ್ಲಿ ತಪಾಸಣೆ ತೀವ್ರ
ಮಡಿಕೇರಿ: ಕೇರಳದಲ್ಲಿ ಕೊರೊನಾ ರೂಪಾಂತರಿಯ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿಯಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ ತೀವ್ರಗೊಳಿಸಿದೆ.
ಆರೋಗ್ಯ ಇಲಾಖೆ ಸಿಬಂದಿ ಕುಟ್ಟ, ಮಾಕುಟ್ಟ, ಕರಿಕೆ ಹಾಗೂ ಸಂಪಾಜೆ ಚೆಕ್‌ಪೋಸ್ಟ್‌ಗಳಲ್ಲಿ ಕೇರಳದಿಂದ ಬರುತ್ತಿರುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸುತ್ತಿದ್ದಾರೆ.