Advertisement

ಋಣಮುಕ್ತರಾಗಲು 29 ಸಾವಿರ ಅರ್ಜಿ

12:55 AM Nov 22, 2019 | mahesh |

ಕುಂದಾಪುರ: ಎಚ್‌.ಡಿ. ಕುಮಾರಸ್ವಾಮಿ ಸರಕಾರ ಜಾರಿಗೆ ತಂದ ಋಣ ಪರಿಹಾರ ಕಾಯಿದೆಯ ಫ‌ಲಾನುಭವಿಗಳಾಗಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29,000 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿ ವರ್ಷದೊಳಗೆ ಆದೇಶ ಮಾಡಬೇಕೆಂದಿದ್ದರೂ ಉಚ್ಚ ನ್ಯಾಯಾಲಯದ ತಡೆ ಇರುವ ಕಾರಣ ಯಾವುದೇ ಪ್ರಕ್ರಿಯೆಗಳು ನಡೆಯುತ್ತಿಲ್ಲ.

Advertisement

ಯಾರಿಗೆಲ್ಲ ಪ್ರಯೋಜನ?
ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗಗಳ ಜನರಿಗೆ ಋಣ ಪರಿಹಾರಕ್ಕಾಗಿ ಈ ಕಾಯ್ದೆ. ಸಾಲ ಪಡೆದಿರುವವರ ಪರವಾಗಿ ಜಾಮೀನುದಾರರು ಕೂಡ ಅಡಮಾನ ಮಾಡಿದ ಚರ, ಸ್ಥಿರ, ಚಿನ್ನಾಭರಣ ವಾಪಸಾತಿಗೆ ಕೋರಿ ಅರ್ಜಿ ಸಲ್ಲಿಸಬಹುದಿತ್ತು. ಖಾಸಗಿ ಲೇವಾದೇವಿದಾರರು ಮತ್ತು ಗಿರವಿದಾರರಿಂದ ಸಾಲ ಪಡೆದಿದ್ದಲ್ಲಿ ಈ ಕಾಯ್ದೆಯಡಿಯಲ್ಲಿ ಪರಿಹಾರ ನೀಡಲು ಅರ್ಹನಾದ ಕುರಿತು ಋಣ ಪರಿಹಾರ ಅಧಿಕಾರಿ (ಸಹಾಯಕ ಕಮಿಷನರ್‌) ನಿರ್ಣಯಿಸಿ ಆದೇಶಿಸಬೇಕು. ಆದೇಶ ಉಲ್ಲಂ ಸಿದರೆ 1 ವರ್ಷ ಜೈಲು, 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ಇದೆ. ಬಾಧಿತನಾದವನು ಜಿಲ್ಲಾಧಿಕಾರಿ ಬಳಿ ಪುನರ್‌ಪರಿಶೀಲನೆ ಅರ್ಜಿ ಸಲ್ಲಿಸಬಹುದು. ಕಾಯ್ದೆ ಜಾರಿಗೆ ಬಂದು ಎರಡು ವರ್ಷಗಳ ಅನಂತರ ಆದೇಶ ಹೊರಡಿಸುವಂತಿಲ್ಲ.

ಯಾರಿಗಿಲ್ಲ?
ಸಾಲಗಾರನೇ ಬಿಟ್ಟುಕೊಟ್ಟ ಕೃಷಿ ಭೂಮಿಯ ಸ್ವತ್ತಿನಿಂದ ಬಾಕಿ ಇರುವ ಬಾಡಿಗೆ, ನ್ಯಾಯಾಲಯದ ಬಿಕರಿ, ಸಲ್ಲಿಸಿದ ಸೇವೆಗಾಗಿ ಸಂಬಳ, ಎಲ್‌ಐಸಿ, ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಹಕಾರ ಸಂಘಗಳ ಕಾಯ್ದೆಯಡಿ ನೋಂದಾಯಿತವಾದ ಸಂಸ್ಥೆಗಳು (ಫೈನಾನ್ಸ್‌), ಚಿಟ್‌ಫ‌ಂಡ್‌ಗಳ ವ್ಯವಹಾರಗಳು ಈ ಕಾಯ್ದೆಯಡಿ ಬರುವುದಿಲ್ಲ.

ಸಾವಿರಾರು ಅರ್ಜಿ
ಕಾಯ್ದೆ ಜಾರಿಗೆ ಬಂದು 90 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಗಡುವು ನೀಡಲಾಗಿದ್ದು ಅ. 27 ಕೊನೆ ದಿನವಾಗಿತ್ತು. ಸಾವಿರಾರು ಜನ ಅರ್ಜಿ ಸಲ್ಲಿಸಿದ್ದರು.
ಆರಂಭದಲ್ಲಿ ಅನರ್ಹ ಅರ್ಜಿ ಸ್ವೀಕರಿಸಲು ನಿರಾಕರಿಸಿದಾಗ ಗಲಭೆ, ದೂರು ಸಲ್ಲಿಕೆ ನಡೆದು ಬಂದ ಎಲ್ಲ ಅರ್ಜಿಗಳನ್ನೂ ಸ್ವೀಕರಿಸಲು ನಿರ್ಧರಿಸಲಾಯಿತು. ಆದರೆ ಬಂದ ಅರ್ಜಿಗಳಲ್ಲಿ ಶೇ. 95ರಷ್ಟು ಅನರ್ಹವಾಗಿದ್ದವು.

ಎಲ್ಲೆಲ್ಲಿ ಎಷ್ಟೆಷ್ಟು?
ಉಡುಪಿ ಜಿಲ್ಲೆಯ ಏಕೈಕ ಎಸಿ ಕಚೇರಿಯಿರುವ ಕುಂದಾಪುರದಲ್ಲಿ 20,971 ಅರ್ಜಿಗಳು ಬಂದಿವೆ. ಪುತ್ತೂರಿನಲ್ಲಿ 9 ಸಾವಿರದಷ್ಟು ಅರ್ಜಿಗಳು ಬಂದಿವೆ ಎಂದು ಅಲ್ಲಿನ ಸಹಾಯಕ ಕಮಿಶನರ್‌ ಎಚ್‌.ಕೆ. ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. ಮಂಗಳೂರಿನಲ್ಲಿ ಯಾವುದೇ ಅರ್ಹ ಅರ್ಜಿಗಳು ಬಂದಿಲ್ಲ, ಜನಸಾಮಾನ್ಯರು ವಿಚಾರಿಸಿಕೊಂಡು ಹೋಗಿದ್ದರೂ ಕಾಯ್ದೆ ಅನ್ವಯವಾಗದ ಕಾರಣ ಅರ್ಜಿ ನೀಡಿಲ್ಲ ಎಂದು ಅಲ್ಲಿನ ಸಹಾಯಕ ಕಮಿಶನರ್‌ ರವಿಚಂದ್ರ ನಾಯಕ್‌ ಅವರು ತಿಳಿಸಿದ್ದಾರೆ.

Advertisement

ಕಚೇರಿಗೆ ಹೊರೆ
ಋಣ ಪರಿಹಾರ ಕಾಯ್ದೆಯಡಿ ಬಂದಿರುವ ಅರ್ಜಿಗಳನ್ನು ನಂಬರ್‌ ಹಾಕಿ ಇರಿಸಲಾಗಿದೆ. ಅವುಗಳಿಗೆ “ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದು ಹಿಂಬರಹ ಕೊಡುವುದಾದರೂ ಕನಿಷ್ಠ 29 ಸಾವಿರ ಪುಟಗಳ ಮುದ್ರಣ ಮಾಡಬೇಕಾದೀತು. ಅದಕ್ಕಾಗಿ ಪ್ರತ್ಯೇಕ ಸಾದಿಲ್ವಾರು ವೆಚ್ಚ, ಸಿಬಂದಿ ನೇಮಿಸಬೇಕಾದೀತು! ಸಿಬಂದಿ ಕೊರತೆಯಿಂದ ನಲುಗುತ್ತಿರುವ ಎಸಿ ಕಚೇರಿಗೆ ಇದೊಂದು ಹೊರೆ.

ವ್ಯಾಪ್ತಿ ಮೀರಿದ ಅರ್ಜಿ
ಬಹುತೇಕ ಅರ್ಜಿಗಳು ಪರಿಹಾರ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅರ್ಹ ಅರ್ಜಿಗಳನ್ನು ನ್ಯಾಯಾಲಯದ ಆದೇಶದ ಬಳಿಕ ವಿಲೇ ಮಾಡಲಾಗುವುದು.
– ಎಚ್‌.ಕೆ. ಕೃಷ್ಣಮೂರ್ತಿ, ಪುತ್ತೂರು ಸಹಾಯಕ ಕಮಿಷನರ್‌

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next