Advertisement

ಟಿ.ಜಿ.ಹಳ್ಳಿ ಡ್ಯಾಮ್‌ಗೆ 286 ಕೋಟಿ

11:43 AM Dec 27, 2018 | Harsha Rao |

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಗೆ ಜಲಮಂಡಳಿ 286 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದ್ದು, 2019ರ ಏಪ್ರಿಲ್‌ನಿಂದ ಕಾಮಗಾರಿಗೆ ಚಾಲನೆ ದೊರೆಯಲಿದೆ.

Advertisement

ತಿಪ್ಪಗೊಂಡನಹಳ್ಳಿ ಜಲಾಶಯವು 3.3 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಈ ಹಿಂದೆ ಬೆಂಗಳೂರಿನ ಕುಡಿಯುವ ನೀರಿನ ಮೂಲವಾಗಿತ್ತು. ಕಲುಷಿತ ನೀರು ಹಾಗೂ ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ ಎಂಬ ಕಾರಣಕ್ಕೆ ಏಳೇಂಟು ವರ್ಷಗಳ ಹಿಂದೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿರುವುದು ಹಾಗೂ ಎತ್ತಿನ ಹೊಳೆ ಯೋಜನೆಯಿಂದ ಜಲಾಶಯಕ್ಕೆ ನೀರು ತರಲು ಸರ್ಕಾರ ಚಿಂತನೆ ನಡೆಸಿರುವುದರಿಂದ ಜಲಾಶಯ ಅಭಿವೃದ್ಧಿಗೆ ಜಲಮಂಡಳಿ ಮುಂದಾಗಿದೆ.

ಒಂದನೇ ಹಂತದ ಕಾಮಗಾರಿಯಲ್ಲಿ ಮೊದಲು ಜಲಾಶಯದಲ್ಲಿ ಸಂಗ್ರಹಗೊಂಡಿ ರುವ 30 ಅಡಿ ಹೂಳು ಮೇಲೆತ್ತಲು 22.7 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುವ ತ್ಯಾಜ್ಯ ನೀರನ್ನು ತಡೆಗಟ್ಟಲು ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಿಸಲಾಗುತ್ತದೆ. ಮುಖ್ಯವಾಗಿ 110 ದಶಲಕ್ಷ ಲೀ. ಸಾಮರ್ಥ್ಯದ ನೀರು ಸಂಸ್ಕರಣಾ ಘಟಕ, 20 ದಶಲಕ್ಷ ಲೀ. ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣೆ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತದೆ. ಆನಂತರ 65.8 ಕೋಟಿ ರೂ. ವೆಚ್ಚದಲ್ಲಿ ತಿಪ್ಪಗೊಂಡನ ಹಳ್ಳಿಯಿಂದ ತಾವರೆಕರೆ ಮೂಲಕ ಬೆಂಗಳೂರಿಗೆ ನೀರುಪೂರೈಕೆ 22 ಕಿ.ಮೀ. ವ್ಯಾಪ್ತಿಯಲ್ಲಿ ಪೈಪ್‌ಲೈನ್‌ ಅಳವಡಿಕೆ ಆರಂಭಗೊಳ್ಳಲಿದೆ. ಮೊದಲ ಹಂತದ ಕಾಮಗಾರಿ 2019ರ ಏಪ್ರಿಲ್‌ಗೆ ಆರಂಭವಾಗಿ 2021
ಅಕ್ಟೋಬರ್‌ಗೆ ಮುಗಿಯಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

ಉಪಯೋಗವೇನು?: ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಯಿಂದ ಬೆಂಗಳೂರಿನ ಬಹುಪಾಲು ಕುಡಿಯುವ ನೀರಿನ ಸಮಸ್ಯೆಗೆ ಕಡಿವಾಣ ಬೀಳಲಿದೆ. ಒಂದೆಡೆ ನಗರದ ಜನಸಂಖ್ಯೆ ಹೆಚ್ಚಳವಾಗಿ ಜಲಮಂಡಳಿಯ ಸೇವೆ ದಿನದಿಂದ ದಿನದಕ್ಕೆ ವಿಸ್ತರಣೆಗೊಳ್ಳುತ್ತಿದೆ. ಮುಂದೆ ನೀರಿನ ಕೊರತೆ ಉಂಟಾಗಬಹುದು. ಈ ಕಾರಣಕ್ಕಾಗಿ ಜಲಮಂಡಳಿಯು ಸಹ ಹೆಚ್ಚಿನ ಆಸಕ್ತಿವಹಿಸಿ ಈ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ.

ನೀರು ತರುವುದೆಲ್ಲಿಂದ?: ಸರ್ಕಾರ ಕಾರ್ಯಗತಗೊಳಿಸುತ್ತಿರುವ ಎತ್ತಿನಹೊಳೆ ಯೋಜನೆಯ ಮೂಲಕ ಬೆಂಗಳೂರಿಗೆ 2.5 ಟಿಎಂಸಿ ನೀರು ಲಭ್ಯವಾಗಲಿದೆ. ಈ ನೀರಲ್ಲಿ 1.7 ಟಿಎಂಸಿ ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಪೂರೈಸಲು ನಿರ್ಧರಿಸಲಾಗಿದೆ. ಉಳಿದ ನೀರು ಮತ್ತು ಹೆಸರುಘಟ್ಟ ಕೆರೆಯಲ್ಲಿ ಸಂಗ್ರಹವಾಗಲಿದೆ. ಎತ್ತಿನಹೊಳೆ ನೀರು ಬರುವಷ್ಟರಲ್ಲಿ ತಿಪ್ಪಗೊಂಡನಗಳ್ಳಿ ಕೆರೆ ಸ್ಪತ್ಛಗೊಳಿಸಿ ಇತರೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಉಳಿದಂತೆ ಈ ಜಲಾಶಯ ಮಳೆ ನೀರನ್ನೇ ಆಶ್ರಯಿಸಲಾಗಿದೆ.

Advertisement

ಈ ಯೋಜನೆಗೆ ಕೆಯುಐಡಿಎಫ್‌ಸಿ ಯಿಂದ ಶೇ.50ರಷ್ಟು, ರಾಜ್ಯ ಸರ್ಕಾರ ಶೇ. 25ರಷ್ಟು ಹಾಗೂ ಜಲಮಂಡಳಿಯ ತನ್ನ ಆದಾಯದಿಂದ ಶೇ.25ರಷ್ಟು ಯೋಜನಾ ಮೊತ್ತವನ್ನು ಅಭಿವೃದ್ಧಿಗಾಗಿ ವ್ಯಯಮಾಡಲಿದೆ. ಇನ್ನು ಈ ಎಲ್ಲಾ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಎರಡನೇ ಹಂತದಲ್ಲಿ ಹೆಸರುಘಟ್ಟ ಕೆರೆಯನ್ನು 120
ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಲಾಗಿದೆ. ಒಟ್ಟಾರೆ ಈ ಎರಡೂ ಯೋಜನೆಗೆ 406 ಕೋಟಿ ರೂ. ವೆಚ್ಚವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next