ಲಕ್ನೋ: ಉತ್ತರಪ್ರದೇಶದ ಸುಗಂಧದ್ರವ್ಯ ಉದ್ಯಮಿ ಪಿಯೂಷ್ ಜೈನ್ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಈವರೆಗೆ 284 ಕೋಟಿ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನ, ಬೆಳ್ಳಿಯನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದು, ಇನ್ನೂ ಕೂಡಾ ಶೋಧ ಕಾರ್ಯ ಮತ್ತು ಲೆಕ್ಕಾಚಾರ ಮುಂದುವರಿದಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:365 ಕೋಟಿ ದೇವತೆಗಳಲ್ಲಿ ಕ್ರೈಸ್ತಕೂಡ ಒಬ್ಬನಾಗುವ ಕಾಲ ಸನ್ನಿಹಿತ: ಸೂಲಿಬೆಲೆ
ಇಂದು ಬೆಳಗ್ಗೆ ಉತ್ತರಪ್ರದೇಶದ ಕನ್ನೌಜ್ ನಲ್ಲಿರುವ ಪಿಯೂಷ್ ಜೈನ್ ಮನೆಯಲ್ಲಿ 107 ಕೋಟಿ ರೂಪಾಯಿ ನಗದು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಎಸ್ ಟಿ (ಸರಕು ಮತ್ತು ಸೇವೆಗೆಳ ತೆರಿಗೆ) ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶ ಕನ್ನೌಜ್ ನ ಛುಪ್ಪಾಟ್ಟಿ ಪ್ರದೇಶದ ನಿವಾಸಿಯಾಗಿರುವ ಪಿಯೂಷ್ ಜೈನ್, ತನ್ನ ಉದ್ಯಮಕ್ಕಾಗಿ ಹಿರಿಯರ ಚಿನ್ನವನ್ನು ಮಾರಾಟ ಮಾಡಿ ಹಣವನ್ನು ಸಂಗ್ರಹಿಸಿರುವುದಾಗಿ ಮೂಲಗಳು ಹೇಳಿವೆ. ಆದರೆ ಈವರೆಗೂ ಜೈನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತನಿಖೆಯ ವೇಳೆ ಅಧಿಕಾರಿಗಳಿಗೆ ಚಿನ್ನವನ್ನು ಮಾರಾಟ ಮಾಡಿ ಹಣ ಸಂಗ್ರಹಿಸಿರುವುದಾಗಿ ಜೈನ್ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಪಿಯೂಷ್ ಜೈನ್ ನಾಪತ್ತೆಯಾಗಿದ್ದು, ಐಟಿ ಅಧಿಕಾರಿಗಳು ನಿರಂತರವಾಗಿ ಮೊಬೈಲ್ ಗೆ ಕರೆ ಮಾಡಿದ್ದ ನಂತರ ಜೈನ್ ಮನೆಗೆ ವಾಪಸ್ಸಾಗಿದ್ದು, ಭಾನುವಾರ ಬಂಧಿಸಲಾಗಿತ್ತು ಎಂದು ಜಿಎಸ್ ಟಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ಜೈನ್ ಮನೆಯಿಂದ ವಶಪಡಿಸಿಕೊಂಡ ನಗದು ಕುರಿತು ವಿವರಣೆ ನೀಡಲು ಸಮಯಾವಕಾಶ ಬೇಕು ಎಂದು ಜೈನ್ ಅಧಿಕಾರಿಗಳಿಗೆ ತಿಳಿಸಿರುವುದಾಗಿ ವರದಿ ಹೇಳಿದ್ದು, ಇದು ಸಂಬಂಧಿಕರ ಹಣ ಎಂದು ಜೈನ್ ತಿಳಿಸಿದ್ದರೂ ಕೂಡಾ ಈವರೆಗೂ ಯಾರೊಬ್ಬರು ಹೇಳಿಕೆ ನೀಡಲು ಮುಂದೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.