Advertisement

ಕಿಸಾನ್‌ ಸಮ್ಮಾನ್‌ಗೆ 28 ಸಾವಿರ ಅರ್ಜಿ

06:05 AM Mar 08, 2019 | Team Udayavani |

ದಾವಣಗೆರೆ: ಮಳೆ ಕೊರತೆ, ಬರಗಾಲ, ಪ್ರವಾಹ… ಮತ್ತಿತರ ನೈಸರ್ಗಿಕ ವಿಕೋಪದಡಿ ಸಿಲುಕಿ ಸಂಕಷ್ಟಕ್ಕೆಗೊಳಗಾಗುವ ರೈತರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಫೆ.1 ರಂದು ಬಜೆಟ್‌ನಲ್ಲಿ ಘೋಷಿಸಿದ್ದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆಗೆ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯಲ್ಲಿ 53,495 ರೈತರು ಅರ್ಹರಾಗಿದ್ದಾರೆ.

Advertisement

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆಯ ಅನ್ವಯ 2 ಹೆಕ್ಟೇರ್‌ (5 ಎಕರೆ) ಗಿಂತಲೂ ಕಡಿಮೆ ಹೊಲ ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಫಲಾನುಭವಿಗಳು. ಅಂತಹ 53,495 ರೈತರ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ಒಂದು ಕಡೆ ಭದ್ರಾ ನಾಲೆ, ಮತ್ತೂಂದು ಕಡೆ ಮಳೆಯಾಶ್ರಿತ ಪ್ರದೇಶದ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟಾರೆ 3,20,828 ಹೆಕ್ಟೇರ್‌ ಕೃಷಿ ಚಟುವಟಿಕೆ ಭೂಮಿ ಇದೆ. ಮುಂಗಾರು ಹಂಗಾಮಿನಲ್ಲಿ 2,44,024, ಹಿಂಗಾರು ಹಂಗಾಮಿನಲ್ಲಿ 17,650, ಬೇಸಿಗೆಯಲ್ಲಿ 53,370 ಹೆಕ್ಟೇರ್‌ನಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತದೆ.
 
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು ರೈತರ ಸಂಖ್ಯೆ 2,10,083. ಅವರಲ್ಲಿ ಶೇ.22.9 ಸರಾಸರಿಯಲ್ಲಿ 48,149 ದೊಡ್ಡ ಹಿಡುವಳಿದಾರರು ಇದ್ದಾರೆ. ಶೇ. 77.1 ರ ಸರಾಸರಿಯಲ್ಲಿ 1,61,934 ಸಣ್ಣ ಮತ್ತು ಅತೀ ಸಣ್ಣ ರೈತರಿದ್ದಾರೆ. ಅವರಲ್ಲಿ 53,495 ರೈತರು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ…
ಯೋಜನೆಗೆ ಅರ್ಹರಾಗಿದ್ದಾರೆ. 

ಕಳೆದ ಹಲವಾರು ವರ್ಷದಿಂದ ಅತೀವ ಮಳೆ ಕೊರತೆಯ ಪರಿಣಾಮ ದಾವಣಗೆರೆ ಜಿಲ್ಲೆ ಬರಕ್ಕೆ ತುತ್ತಾಗುತ್ತಿದೆ. ಸತತ ಎರಡು ವರ್ಷವೂ ಜಿಲ್ಲೆಯು ಬರದ ಬೇಗೆಯಲ್ಲಿ ಬೇಯುತ್ತಿದೆ ಎನ್ನುವುದು ಪ್ರಕೃತಿ ವಿಕೋಪವನ್ನ ಸಾರಿ ಸಾರಿ ಹೇಳುತ್ತಿದೆ. ಅಂತಹ ರೈತರಿಗಾಗಿ ಒಂದಿಷ್ಟು ನೆರವು ನೀಡುವ ಉದ್ದೇಶದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆ ತುಸು ನೆಮ್ಮದಿ ಕೊಡಬಹುದು ಎಂಬ ಅಂದಾಜಿದೆ.

ದಾವಣಗೆರೆ ತಾಲೂಕಿನಲ್ಲಿನ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆ 12,166, ಚನ್ನಗಿರಿಯಲ್ಲಿ 10,457, ಹರಿಹರದಲ್ಲಿ 7,136, ಹೊನ್ನಾಳಿಯಲ್ಲಿ 9,305, ಜಗಳೂರಿನಲ್ಲಿ 8,587 ಹಾಗೂ ನ್ಯಾಮತಿಯಲ್ಲಿ 5,844 ಒಳಗೊಂಡಂತೆ 53,495 ಸಣ್ಣ ಮತ್ತು ಅತೀ ಸಣ್ಣ ರೈತರಿದ್ದಾರೆ. ಅವರಲ್ಲಿ ಈವರೆಗೆ 28,400 ರೈತರು ದಾಖಲೆ ಸಲ್ಲಿಸಿದ್ದಾರೆ. ದಾವಣಗೆರೆ ತಾಲೂಕಿನಲ್ಲಿ 7,296 ರೈತರು, ಚನ್ನಗಿರಿಯಲ್ಲಿ 3,921, ಹರಿಹರದಲ್ಲಿ 4,989, ಹೊನ್ನಾಳಿಯಲ್ಲಿ 4,605, ಜಗಳೂರಿನಲ್ಲಿ 4,282 ಹಾಗೂ ನ್ಯಾಮತಿ ತಾಲೂಕಿನಲ್ಲಿ 3,300 ರೈತರು ದಾಖಲೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆಯಡಿ ಪ್ರಕಟಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ಅರ್ಹ ರೈತರ ಹೆಸರು ಇಲ್ಲದೇ ಹೋದಲ್ಲಿ ಅಂತಹವರು ಗ್ರಾಮ ಲೆಕ್ಕಾಧಿಕಾರಿಗೆ ದಾಖಲೆ ಸಲ್ಲಿಸಿ, ಹೆಸರು ನೋಂದಾಯಿಸಿಕೊಳ್ಳುವ ಅವಕಾಶ ಇದೆ. 

Advertisement

2 ಹೆಕ್ಟೇರ್‌(5 ಎಕರೆ)ಗಿಂತಲೂ ಕಡಿಮೆ ಹೊಲ ಹೊಂದಿದ್ದರೂ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆಯ ಪಟ್ಟಿಯಲ್ಲಿ ಹೆಸರು ಇಲ್ಲದ ರೈತರು ಆನ್‌ಲೈನ್‌ ಮೂಲಕ ಅಗತ್ಯ ದಾಖಲೆಗಳೊಂದಿಗೆ ಹೆಸರು ದಾಖಲಿಸಬಹುದು.

ಸಂಬಂಧಿತ ಗ್ರಾಮ ಲೆಕ್ಕಾಧಿಕಾರಿಗಳು ಅದರ ಪರಿಶೀಲನೆ ನಡೆಸುವರು. ಒಂದೊಮ್ಮೆ ಅರ್ಹತೆ ಹೊಂದಿದ್ದರೆ ಅಂತಹ ರೈತರ ಪಟ್ಟಿಯನ್ನ ಕೃಷಿ ಇಲಾಖೆಯ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಒಂದೊಮ್ಮೆ ಅರ್ಹತೆ ಇಲ್ಲದೇ ಹೋದರೆ ಅಲ್ಲಿಯೇ ತಿರಸ್ಕಾರ ಮಾಡಲಾಗುತ್ತದೆ.

ಒಟ್ಟಾರೆ 53,495 ರೈತರು ಸಂಬಂಧಿತ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸುವಂತಹ ದಾಖಲೆಯನ್ನ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಪ್‌ಲೋಡ್‌ ಮಾಡಬೇಕಾದಂತಹ ರೈತ ಸಂಪರ್ಕ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣಕ್ಕೆ ಬಾಪೂಜಿ ಸೇವಾ ಕೇಂದ್ರ, ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಲ್ಲೂ ದಾಖಲೆ ಸಲ್ಲಿಕೆ, ಅಪ್‌ಲೋಡ್‌ ಗೆ ಅವಕಾಶ ಮಾಡಿಕೊಡಬೇಕು ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ಸಹ ಮಾಡಿಕೊಂಡಿದೆ.

ಎಲ್ಲರಿಗೂ ವಿಸ್ತರಿಸಬೇಕು ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆ ನಿಜಕ್ಕೂ ಒಳ್ಳೆಯ ಯೋಜನೆ. ಆದರೆ, ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾತ್ರ ಸೀಮಿತ ಮಾಡಿರುವುದು ಸರಿಯಲ್ಲ. ತೆಲಂಗಾಣದಲ್ಲಿ ಬಹಳ ಚೆನ್ನಾಗಿ ಈ ರೀತಿಯ ಯೋಜನೆ ಜಾರಿಗೊಳಿಸಲಾಗಿದೆ. ಅಲ್ಲಿ 1 ಎಕರೆಗೆ 5 ಸಾವಿರ ಕೊಡಲಾಗುತ್ತದೆ. ಆ ರೀತಿ ಕೊಡುವುದರಿಂದ ರೈತರಿಗೆ ಒಂದಷ್ಟು ಶಕ್ತಿ  ಡಿದಂತಾಗುತ್ತದೆ. ತೆಲಂಗಾಣದ ಮಾದರಿಯಲ್ಲಿ ಹೆಚ್ಚಿನ ನೆರವು ನೀಡುವಂತಾಗಬೇಕು. ಸಣ್ಣ ಮತ್ತು ಅತೀ ಸಣ್ಣ ರೈತರು ಎನ್ನದೆ ಎಲ್ಲಾ ರೈತರಿಗೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆಯನ್ನ ವಿಸ್ತರಿಸುವ ಮೂಲಕ ಅನುಕೂಲ ಮಾಡಿಕೊಡಬೇಕು.
 ಅರುಣ್‌ಕುಮಾರ್‌ ಕುರುಡಿ, ಉಪಾಧ್ಯಕ್ಷರು, ರಾಜ್ಯ ರೈತ ಸಂಘ.

ರೈತರಿಗೆ ತೃಪ್ತಿ ಇಲ್ಲ
ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆಯಡಿ ವರ್ಷಕ್ಕೆ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ 6 ಸಾವಿರ ಕೊಡುವುದರಿಂದ ತೃಪ್ತಿ ಇಲ್ಲ. ಮೇಲಾಗಿ ಯಾವ ರೈತರೂ ಈ ರೀತಿಯಲ್ಲಿ ಹಣದ ನೆರವು ಕೇಳಿರಲಿಲ್ಲ. ರೈತರಿಗೆ ಇದೊಂದು ತೆರನಾದ ಅಪಮಾನ. ರೈತರಿಗೆ ಲಾಭವೇ ಬೇಡ. ಆಗಿರುವಂತಹ ನಷ್ಟವನ್ನಾದರೂ ಸರಿದೂಗಿಸಿ ಕೊಡಬೇಕು. ಯೋಜನೆಯಡಿ ಕಂತಿನಲ್ಲಿ 2 ಸಾವಿರ ಕೊಡುವುದು ಒಂದು ತರ ಮೊಬೈಲ್‌ ಕರೆನ್ಸಿಗೆ ಹಣ ಕೊಟ್ಟಂತೆ ಆಗುತ್ತದೆ. ಅಲ್ಲದೆ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಮಾತ್ರ ಎನ್ನುವುದು ಸಹ ಸರಿ ಅಲ್ಲ. ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಸಣ್ಣ ರೈತರೇ ಆಗಿದ್ದಾರೆ. ಹಾಗಾಗಿ ಎಲ್ಲರಿಗೂ ಆಗುವ ನಷ್ಟವನ್ನ ಭರಿಸಿಕೊಡುವಂತಾಗಬೇಕು.  
ಹುಚ್ಚವ್ವನಹಳ್ಳಿ ಮಂಜುನಾಥ್‌, ರಾಜ್ಯ ಅಧ್ಯಕ್ಷ ರೈತ ಸಂಘ ಮತ್ತು ಹಸಿರು ಸೇನೆ.

ದಾಖಲೆ ಸಂಗ್ರಹ ಮಾ. 31ರ ಒಳಗೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ… ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ ಆಗುವ ಹಿನ್ನೆಲೆಯಲ್ಲಿ ಬಾಕಿ ಉಳಿದಿರುವ ರೈತರಿಂದ ದಾಖಲೆ ಸಂಗ್ರಹಿಸುವ ಕಾರ್ಯ ಮುಂದುವರೆದಿದೆ. ಈವರೆಗೆ ಮೊದಲ ಕಂತಿನ
ಹಣ ಜಿಲ್ಲೆಗೆ ಬಂದಿಲ್ಲ. 
 ಶರಣಪ್ಪ ಬಿ.ಮುದಗಲ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ.

„ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next