ಕಾಗವಾಡ: ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2800 ರೂ. ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಂಪವಾಡದ ಅಥಣಿ ಶುಗರ್ಸ್ ಲಿ., ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಹಾಗೂ ಶಾಸಕ ಶ್ರೀಮಂತ ಪಾಟೀಲ ಘೋಷಣೆ ಮಾಡಿದರು.
ಬುಧವಾರ ಅಥಣಿ ಶುಗರ್ಸ್ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಅವರು ಮಾತನಾಡಿದರು.
2022-23ನೇ ಸಾಲಿನ ಹಂಗಾಮಿನಲ್ಲಿ ನಮ್ಮ ಕಾರ್ಖಾನೆ 20 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಟನ್‌ಗೆ ರೂ. 2800 ದರ ಘೋಷಿಸಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಮಾತನಾಡಿ, ಕಳೆದ ಸಾಲಿನಲ್ಲಿ 17 ಲಕ್ಷ ಟನ್ ಕಬ್ಬು ನುರಿಸಿ ರೈತರಿಗೆ ಪ್ರತಿ ಟನ್‌ಗೆ 2700 ರೂ. ದರವನ್ನು ನೀಡಲಾಗಿದೆ ಎಂದರು.
ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಯೋಗೇಶ ಪಾಟೀಲ, ಸುಶಾಂತ ಪಾಟೀಲ, ಕಾರ್ಖಾನೆ ನಿರ್ದೇಶಕರು, ಸ್ಥಳೀಯ ಮುಖಂಡರು, ರೈತರು, ಕಾರ್ಮಿಕರು ಉಪಸ್ಥಿತರಿದ್ದರು.