Advertisement

28 ಕ್ಷೇತ್ರ, 614 ನಾಮಪತ್ರ!

11:40 AM Apr 25, 2018 | Team Udayavani |

ಬೆಂಗಳೂರು: ಬಿಬಿಎಂಪಿ ಹಾಗೂ ಬೆಂಗಳೂರು ನಗರದ ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 471 ಅಭ್ಯರ್ಥಿಗಳಿಂದ ಒಟ್ಟು 763 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

Advertisement

ಮಲ್ಲೇಶ್ವರದ ಐಪಿಪಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಗೆ ಏ.24ಕೊನೆಯ ದಿನವಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ಕಚೇರಿಗೆ 3 ಗಂಟೆಯೊಳಗೆ ಬಂದವರಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಅದರಂತೆ 28 ಕ್ಷೇತ್ರಗಳಲ್ಲಿ 763 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಏ.27ರೊಳಗೆ ನಾಮಪತ್ರ ವಾಪಸ್‌ ಪಡೆಯಲು ಅವಕಾಶವಿದೆ ಎಂದರು. ಬುಧವಾರದಿಂದಲೇ ಎಲ್ಲ ಚುನಾವಣಾಧಿಕಾರಿಗಳು ನಾಮಪತ್ರಗಳ ಪರಿಶೀಲನಾ ಕಾರ್ಯ ಆರಂಭಿಸಲಿದ್ದು, ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಪರಿಶೀಲನಾ ಕಾರ್ಯವನ್ನು ವೀಕ್ಷಿಸಬಹುದಾಗಿದೆ.

ಈ ವೇಳೆ ಅವರೊಂದಿಗೆ ಒಬ್ಬರು ಅನುಮೋದಕರು, ಪಕ್ಷದ ಏಜೆಂಟ್‌ ಹಾಗೂ ವಕೀಲರು ಭಾಗವಹಿಸಲು ಅನುಮತಿ ನೀಡಲಾಗಿದೆ. ಅಭ್ಯರ್ಥಿಗಳು ಇತರೆ ಅಭ್ಯರ್ಥಿಗಳ ನಾಮಪತ್ರಗಳನ್ನು ಮುಟ್ಟದೆ ನೋಡಬಹುದಾಗಿದ್ದು, ನಾಮಪತ್ರಗಳ ಪರಿಶೀಲನಾ ಕಾರ್ಯವನ್ನು ವಿಡಿಯೋ ಚಿತ್ರೀಕರಿಸಲಾಗುತ್ತದೆ ಎಂದು ಹೇಳಿದರು. 

ನಾಮಪತ್ರ ಸಲ್ಲಿಸಿರುವ ಯಾವುದೇ ಅಭ್ಯರ್ಥಿಗಳು ಇತರೆ ಅಭ್ಯರ್ಥಿಗಳ ನಾಮಪತ್ರದ ಕುರಿತು ಆಕ್ಷೇಪಣೆ ಸಲ್ಲಿಸಿದರೆ, ಚುನಾವಣಾಧಿಕಾರಿಗಳು ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಿದ್ದಾರೆ. 25 ವರ್ಷಕ್ಕಿಂತ ಕಡಿಮೆ ವಯಸ್ಸು, ಬುದ್ಧಿಮಾದ್ಯಂತೆ, ಲಾಭರಹಿತ ಹುದ್ದೆಯಲ್ಲಿರುವುದು ಸೇರಿ ಇತರೆ ಗಂಭೀರ ಲೋಪಗಳು ಕಂಡುಬಂದಾಗ ಮಾತ್ರ ನಾಮಪತ್ರ ರದ್ದುಗೊಳಿಸಲಾಗುವುದು ಎಂದು ತಿಳಿಸಿದರು. 

Advertisement

ನಾಮಪತ್ರಗಳನ್ನು ಹಿಂಪಡೆಯಲು ನೀಡಿರುವ ಅವಧಿ ಮುಗಿದ ನಂತರ ಬ್ಯಾಲೆಟ್‌ನಲ್ಲಿ ಇರಲಿರುವ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಈ ವೇಳೆ ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳಿಗೆ ಕನ್ನಡ ಅಕ್ಷರ ಮಾಲೆಯಂತೆ ಬ್ಯಾಲೆಟ್‌ನಲ್ಲಿ ಆದ್ಯತೆ ನೀಡಲಾಗುವುದು. ನಂತರದಲ್ಲಿ ನೋಂದಾಯಿತ ಪಕ್ಷಗಳು ಹಾಗೂ ಕೊನೆಯದಾಗಿ ಪಕ್ಷೇತರರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಚುನಾವಣಾ ಕರ್ತವ್ಯಕ್ಕೆ ಗೈರಾದರೆ ಜೈಲು!: ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕರ್ತವ್ಯಕ್ಕೆ 56,440 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ಗೈರಾಗುವ ಸಿಬ್ಬಂದಿ ವಿರುದ್ಧ ಎಫ್ಐಆರ್‌ ದಾಖಲಿಸಿ ಜೈಲಿಗೆ ಕಳಿಸುವುದಾಗಿ ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದರು.

ಈಗಾಗಲೇ ಚುನಾವಣಾ ಕಾರ್ಯಕ್ಕೆ ನೇಮಿಸಿಕೊಂಡಿರುವ ಸಿಬ್ಬಂದಿಗಳ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಲಾಗಿದ್ದು, ಎಲ್ಲ ಸಿಬ್ಬಂದಿಗೆ ಖುದ್ದು ನೋಟಿಸ್‌ ತಲುಪಿಸಲಾಗಿದೆ. ಇದರೊಂದಿಗೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿಯೂ ಅಭ್ಯರ್ಥಿಗಳು ನೇಮಕ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್‌ 28 ರಂದು ಹಾಗೂ ಮೇ 5ರಂದು ಚುನಾವಣಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು.

ನಗರದಲ್ಲಿ 10 ಕೋಟಿ ಜಪ್ತಿ: ನೀತಿ ಸಂಹಿತೆ ಜಾರಿಯಾದ ಬಳಿಕ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 2.90 ಕೋಟಿ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಜತೆಗೆ 6.10 ಕೋಟಿ ರೂ. ಮೌಲ್ಯದ ಮದ್ಯ , 55.78 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಬಿಜೆಪಿ, ಕಾಂಗ್ರೆಸ್‌ ವಿರುದ್ಧ ತಲಾ ಎರಡು ಸೇರಿ ಒಟ್ಟು 17 ಎಫ್ಐಆರ್‌ ದಾಖಲಿಸಲಾಗಿದೆ. ಇತ್ತೀಚೆಗೆ  ಸಿ.ವಿ.ರಾಮನ್‌ ನಗರದಲ್ಲಿ 2.20 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು. 

ಮೇ 5ರೊಳಗೆ ಓಟರ್‌ ಸ್ಲಿಪ್‌ ವಿತರಣೆ: ಫೆಬ್ರವರಿ 28ರವರೆಗೆ ನೋಂದಣಿ ಮಾಡಿಕೊಂಡಿರುವ ಮತದಾರರಿಗೆ ಈಗಾಗಲೇ ಗುರುತಿನ ಚೀಟಿ ಹಾಗೂ ಓಟರ್‌ ಸ್ಲಿಪ್‌ ನೀಡಲಾಗಿದೆ. ಆ ನಂತರದಲ್ಲಿ ನೋಂದಾಣಿ ಮಾಡಿಕೊಂಡಿರುವ ಮತದಾರರಿಗೆ ಮೇ 1 ರಿಂದ 5ರವರೆಗೆ ಗುರುತಿನ ಚೀಟಿ, ಸ್ಲಿಪ್‌ ಹಾಗೂ ಗೈಡ್‌ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು. 

ಹೋರ್ಡಿಂಗ್ಸ್‌ ಹಾಕಲು ಅನುಮತಿ ನೀಡಿಲ್ಲ: ನಗರದಲ್ಲಿರುವ ಜಾಹೀರಾತು ಫ‌ಲಕಗಳಿಗೆ ಅನುಮತಿ ನೀಡುವಂತೆ ರಾಜಕೀಯ ಪಕ್ಷಗಳು ಕೋರಿದ್ದು, ಈವರೆಗೆ ಯಾವುದೇ ಪಕ್ಷಗಳಿಗೆ ಜಾಹೀರಾತು ಫ‌ಲಕಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ನಗರದಲ್ಲಿ ಈಗಾಗಲೇ 860 ಅನಧಿಕೃತ ಜಾಹೀರಾತು ಫ‌ಲಕಗಳನ್ನು ಕಬ್ಬಿಣದ ಸರಳು ಸಮೇತವಾಗಿ ತೆರವುಗೊಳಿಸಲಾಗಿದ್ದು, 2650 ಅನಧಿಕೃತ ಜಾಹೀರಾತು ಫ‌ಲಕಗಳಿವೆ. ಸಾರ್ವಜನಿಕ ಮುಕ್ತ ಪ್ರದೇಶಗಳ ಸಂರಕ್ಷಣೆ ಕಾಯ್ದೆ 1981, ಕೆಎಂಸಿ ಹಾಗೂ ಜಾಹೀರಾತು ಉಪವಿಧಿಗಳಂತೆ ಅಗತ್ಯ ಕ್ರಮಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.

ಪಾಲಿಕೆಯಿಂದ ಟ್ರ್ಯಾಕಿಂಗ್‌ ವ್ಯವಸ್ಥೆ: ಚುನಾವಣಾ ಆಯೋಗದಿಂದ ರಚಿಸಿರುವ ವಿಚಕ್ಷಣ ದಳಗಳು ಹಾಗೂ ಅಧಿಕಾರಿಗಳ ವಾಹನಗಳು ಎಲ್ಲಿವೆ ಎಂಬ ಮಾಹಿತಿ ಹಿರಿಯ ಅಧಿಕಾರಿಗಳು ತಿಳಿಯುವ ಉದ್ದೇಶದಿಂದ ಅಭಿವೃದ್ಧಿಪಡಿಸಿರುವ “ಬಿಬಿಎಂಪಿ ವಿಟ್ರ್ಯಾಕಿಂಗ್‌’ ಆ್ಯಪ್‌ಗೆ ಎನ್‌.ಮಂಜುನಾಥ ಪ್ರಸಾದ್‌ ಹಾಗೂ ಪಾಲಿಕೆಯ ವಿಶೇಷ ಆಯುಕ್ತ ಮನೋಜ್‌ ರಾಜನ್‌ ಅವರು ಚಾಲನೆ ನೀಡಿದರು. ಚುನಾವಣಾ ಕಾರ್ಯಕ್ಕೆ ಬಳಸಲಾಗುತ್ತಿರುವ 650 ವಾಹನಗಳಿರುವ ಸ್ಥಳದ ಕ್ಷಣ ಕ್ಷಣ ಮಾಹಿತಿ ದೊರೆಯಲಿದ್ದು, ಇದರಿಂದ ಸಾರ್ವಜನಿಕರು ನೀಡುವ ದೂರುಗಳಿಗೆ ಶೀಘ್ರ ಸ್ಪಂದಿಸಬಹುದಾಗಿದೆ ಎಂದು ವಿವರಿಸಿದರು. 

ನಾಮಪತ್ರ ಸಲ್ಲಿಕೆ ವಿವರ
ಪಕ್ಷ    ನಾಮಪತ್ರಗಳ ಸಂಖ್ಯೆ
ಬಹುಜನ ಸಮಾಜ ಪಕ್ಷ    6
ಬಿಜೆಪಿ    83
ಸಿಪಿಐ(ಎಂ)    7
ಕಾಂಗ್ರೆಸ್‌     84
ನಮ್ಮ ಕಾಂಗ್ರೆಸ್‌ ಪಕ್ಷ    4
ಜೆಡಿಎಸ್‌     60
ಎಎಪಿ    17
ಇತರೆ ಪಕ್ಷಗಳು    172
ಪಕ್ಷೇತರರು    286

Advertisement

Udayavani is now on Telegram. Click here to join our channel and stay updated with the latest news.

Next