ಆಂಧ್ರಪ್ರದೇಶ: ಸುಮಾರು 27 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಾಲ್ಕು ಖಾಸಗಿ ಶಾಲೆಗಳನ್ನು ಬಂದ್ ಮಾಡುವಂತೆ ಅಧಿಕಾರಿಗಳು ಸೂಚಿಸಿರುವುದಾಗಿ ವರದಿ ತಿಳಿಸಿದೆ.
ನ್ಯೂಸ್ ಮಿನಿಟ್ ವರದಿ ಪ್ರಕಾರ, ಖಾಸಗಿ ಶಾಲೆಯ 9 ಮತ್ತು 10ನೇ ತರಗತಿಯ 27 ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಇತ್ತೀಚೆಗಷ್ಟೇ ಆಂಧ್ರದಲ್ಲಿ ಕೆಲವು ಮುಂಜಾಗ್ರತಾ ಕ್ರಮದೊಂದಿಗೆ ಶಾಲೆಗಳನ್ನು ಪುನರಾರಂಭಿಸಲಾಗಿತ್ತು.
ಹತ್ತು ದಿನಗಳವರೆಗೆ ನಾಲ್ಕು ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದು, ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಸಿಂಪಡಣೆ ಮಾಡುವಂತೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ದೇಶದಲ್ಲಿ ಅನ್ ಲಾಕ್ 5.0 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಶಾಲಾ, ಕಾಲೇಜುಗಳನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದ್ದ ನಂತರ ಆಂಧ್ರದಲ್ಲಿ ಕೆಲವು ಮುಂಜಾಗ್ರತಾ ಕ್ರಮದೊಂದಿಗೆ ಶಾಲೆ ಆರಂಭಿಸಲಾಗಿತ್ತು.
ಆಂಧ್ರಪ್ರದೇಶದಲ್ಲಿ ಪ್ರಾಥಮಿಕ ಶಾಲೆ ಇನ್ನಷ್ಟೇ ಆರಂಭವಾಗಬೇಕಾಗಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಾದ ನಂತರ ದೀರ್ಘಕಾಲದವರೆಗೆ ಶಾಲಾ, ಕಾಲೇಜು ಬಂದ್ ಆಗಿತ್ತು. ಏತನ್ಮಧ್ಯೆ ಶಾಲೆಗಳನ್ನು ನವೆಂಬರ್ 2ರಿಂದ ಆರಂಭಿಸಲುವುದಾಗಿ ಮುಖ್ಯಮಂತ್ರಿ ಜಗನ್ ರೆಡ್ಡಿ ತಿಳಿಸಿದ್ದರು. ಅಲ್ಲದೇ 9, 10ನೇ ತರಗತಿ ವಿದ್ಯಾರ್ಥಿಗಳ ತರಗತಿ ಪುನರಾರಂಭಿಸಲಾಗಿತ್ತು.