ಚೆನ್ನೈ: 2018ರಲ್ಲಿ ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ ನಡೆದ ತ್ರಿವಳಿ ದಲಿತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ವಿಚಾರಣಾಧೀನ ಕೋರ್ಟ್ 27 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ:ಭಟ್ಕಳ : ಗುಡ್ಡ ಕುಸಿದು ನಾಲ್ಕು ಜೀವ ಬಲಿ ಪಡೆದ ಮುಟ್ಟಳ್ಳಿಯಲ್ಲಿ ಮತ್ತೆ ಗುಡ್ಡ ಕುಸಿತ
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 27 ಆರೋಪಿಗಳು ದೋಷಿತರು ಎಂದು ವಿಶೇಷ ಕೋರ್ಟ್ ತೀರ್ಪು ನೀಡಿದ್ದು, ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರುವುದಾಗಿ ವರದಿ ತಿಳಿಸಿದೆ.
ಎಸ್ಸಿ, ಎಸ್ಟಿ ವಿಚಾರಣಾಧೀನ ವಿಶೇಷ ಕೋರ್ಟ್ ನ ನ್ಯಾಯಾಧೀಶರಾದ ಜಿ.ಮುತುಕುಮಾರನ್ ಎಲ್ಲಾ 27 ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ವರದಿ ವಿವರಿಸಿದೆ.
2018ರ ಮೇ 28ರಂದು ಶಿವಗಂಗೈ ಜಿಲ್ಲೆಯ ತಿರುಪ್ಪಾಚೆಟ್ಟೈ ಸಮೀಪದ ಕಚನಾಥಂ ಗ್ರಾಮದಲ್ಲಿ ದಲಿತ ಸಮುದಾಯದ ಅರ್ಮುಗಂ (65ವರ್ಷ), ಷಣ್ಮುಗನಾಥನ್ (31ವರ್ಷ) ಮತ್ತು ಚಂದ್ರಶೇಖರ್ (34ವರ್ಷ) ಸೇರಿದಂತೆ ಮೂವರನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು.
ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಸರಿಯಾಗಿ ಗೌರವ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಈ ಕೊಲೆ ನಡೆದಿತ್ತು ಎಂದು ವರದಿ ತಿಳಿಸಿದೆ. ಅಂದು ನಡೆದ ದಾಳಿಯಲ್ಲಿ ಇತರ ಐದು ಮಂದಿ ದಲಿತರು ಗಾಯಗೊಂಡಿದ್ದರು. ಅವರಲ್ಲಿ ಗಾಯಗೊಂಡಿದ್ದ ಧನಶೇಖರನ್ (32) ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.