ಕಾಬೂಲ್:ಕಳೆದ 24ಗಂಟೆಗಳಲ್ಲಿ 262 ತಾಲಿಬಾನ್ ಉಗ್ರರನ್ನು ಅಫ್ಘಾನ್ ಭದ್ರತಾ ಪಡೆ ಹೊಡೆದುರುಳಿಸಿರುವುದಾಗಿ ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲ 176 ತಾಲಿಬಾನ್ ಉಗ್ರರು ಗಾಯಗೊಂಡಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:‘ನಿಮ್ಮಿಂದ ಕಲೆತ ಜೀವನದ ಪಾಠಗಳು ಎಂದೂ ಮರೆಯೋಲ್ಲ’: ಮಾಜಿ ಅತ್ತೆ ನಿಧನಕ್ಕೆ ಅನು ಭಾವುಕ
ಭದ್ರತಾ ಪಡೆಯ ಕಾರ್ಯಾಚರಣೆ ಸಂದರ್ಭದಲ್ಲಿ 21 ಐಇಡಿ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ತಾಲಿಬಾನ್ ಭಯೋತ್ಪಾದಕರು ನಗರದೊಳಗೆ ನುಗ್ಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿ ವಿವರಿಸಿದೆ.
ಈ ಬೆಳವಣಿಗೆ ನಂತರ ಅಫ್ಘಾನಿಸ್ತಾನ್ ಸರ್ಕಾರ ದೇಶಾದ್ಯಂತ ಕರ್ಫ್ಯೂವನ್ನು ಜಾರಿಗೊಳಿಸಿದೆ ಎಂದು ವರದಿ ತಿಳಿಸಿದೆ. ರಾಜಧಾನಿ ಕಾಬೂಲ್ ಹಾಗೂ ಇತರ ಎರಡು ಪ್ರಾಂತ್ಯಗಳಲ್ಲಿ ರಾತ್ರಿ 10ರಿಂದ ಬೆಳಗ್ಗಿನ ಜಾವ 4ಗಂಟೆವರೆಗೆ ಯಾವುದೇ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಹೇಳಿದೆ.
24ಗಂಟೆಯಲ್ಲಿ ಅಫ್ಘಾನ್ ಭದ್ರತಾ ಪಡೆ ಲಾಗ್ಮಾನ್, ನುರಿಸ್ತಾನ್, ಕುನಾರ್, ಘಜ್ನಿ, ಪಾಕ್ಟಿಯಾ, ಕಂದಾಹಾರ್, ಹೇರಾತ್, ಬಾಲ್ಕ್, ಜೌಝಾನ್, ಹೆಲ್ಮಂಡ್, ಕುಂದುಝ್ ಮತ್ತು ಕಾಪಿಸಾ ಪ್ರಾಂತ್ಯಗಳಲ್ಲಿ ಕಾರ್ಯಾಚರಣೆ ನಡೆಸಿರುವುದಾಗಿ ವರದಿ ವಿವರಿಸಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾಪಡೆಯನ್ನು ಹಿಂಪಡೆದ ನಂತರ ಕಳೆದ ಎರಡು ತಿಂಗಳಿನಿಂದ ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್ ಉಗ್ರರ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ದೇಶದ ಅರ್ಧದಷ್ಟು ಪ್ರದೇಶಗಳು ತಮ್ಮ ಹಿಡಿತದಲ್ಲಿರುವುದಾಗಿ ತಾಲಿಬಾನ್ ಉಗ್ರರು ಘೋಷಿಸಿಕೊಂಡಿದ್ದಾರೆ. ಆದರೆ ಅಫ್ಘಾನ್ ಸರ್ಕಾರ ತಾಲಿಬಾನ್ ಹೇಳಿಕೆಯನ್ನು ತಳ್ಳಿಹಾಕಿದೆ.