ನವದೆಹಲಿ: ಮುಂಬೈನಲ್ಲಿ ನಡೆದ 26/11ರ ದಾಳಿಯು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಕೃತ್ಯ ಎಂಬುದನ್ನು ಸ್ವತಃ ಪಾಕ್‌ನ ಮಾಜಿ ಭದ್ರತಾ ಅಧಿಕಾರಿ ಮಹ್ಮದ್ ಅಲಿ ದುರಾನಿ ಬಹಿರಂಗಪಡಿಸಿದ್ದಾರೆ.
ದಾಳಿಗೆ ಸಂಬಂಧಿಸಿದ ಸಾಕ್ಷ್ಯ ಕೊಡಿ ಎಂದು ಪದೇ ಪದೆ ಕೇಳುತ್ತಾ, ನಾಟಕವಾಡುತ್ತಿದ್ದ ಪಾಕಿಸ್ತಾನಕ್ಕೆ ದುರಾನಿ ಅವರ ಈ ಹೇಳಿಕೆ ಆಘಾತ ಮೂಡಿಸಿದೆ.
ಪಾಕ್‌ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಆಗಿರುವ ದುರಾನಿ ಅವರು ಸೋಮವಾರ ನವದೆಹಲಿಯ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆ ಆಯೋಜಿಸಿದ್ದ ಭಯೋತ್ಪಾದನಾ ನಿಗ್ರಹ ಸಮ್ಮೇಳನದಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. “ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ನಡೆಸಿದ 26/11ರ ದಾಳಿಯು ಗಡಿಯಾಚೆಗಿನ ಭಯೋತ್ಪಾದನೆಗೆ ಸ್ಪಷ್ಟ ಉದಾಹರಣೆಯಾಗಿದೆ. ಅದಕ್ಕೆ ಕಾರಣನಾದ ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಕಠಿಣ ಶಿಕ್ಷೆ ಆಗಬೇಕೆಂದು ನಾನು ಬಯಸುತ್ತೇನೆ,’ ಎಂದು ದುರಾನಿ ಹೇಳಿದ್ದಾರೆ.
ಸರ್ಕಾರದ ಕೈವಾಡವಿಲ್ಲ: ಇದೇ ಸಂದರ್ಭದಲ್ಲಿ ಅವರು, ಮುಂಬೈ ದಾಳಿಯಲ್ಲಿ ಪಾಕ್ ಸರ್ಕಾರದ ಪಾತ್ರವಿರಲಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. “ಒಂದಂತೂ ಸತ್ಯ. 26/11ರ ದಾಳಿಯಲ್ಲಿ ಪಾಕಿಸ್ತಾನ ಸರ್ಕಾರದ್ದಾಗಲೀ, ಗುಪ್ತಚರ ಸಂಸ್ಥೆ ಐಎಸ್‌ಐನದ್ದಾಗಲೀ ಯಾವುದೇ ಪಾತ್ರವಿಲ್ಲ. ಇದು ಶೇ.110 ರಷ್ಟು ಸತ್ಯ,’ ಎಂದಿದ್ದಾರೆ. ಈ ಕುರಿತ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ದುರಾನಿ, “ನಾನು ಈ ಹಿಂದೆ ಮುಂಬೈ ದಾಳಿ ಕುರಿತು ಹೇಳಿಕೆ ಕೊಟ್ಟಿದ್ದೆ. ಅದು ನಮ್ಮ ಸರ್ಕಾರಕ್ಕೆ ಇಷ್ಟವಾಗಲಿಲ್ಲ. ಹಾಗಾಗಿಯೇ ನನ್ನನ್ನು ವಜಾ ಮಾಡಲಾಯಿತು,’ ಎಂದಿದ್ದಾರೆ. ಪಾಕಿಸ್ತಾನಕ್ಕೆ ಉಗ್ರ ಹಫೀಜ್ ಸಯೀದ್‌ನಿಂದ ಏನಾದರೂ ಲಾಭವಿದೆಯೇ ಎಂಬ ಪ್ರಶ್ನೆಗೆ, “ಅವನಿಂದ ಪಾಕಿಸ್ತಾನಕ್ಕೆ ಯಾವ ಲಾಭವೂ ಇಲ್ಲ. ಅವನಿಗೆ ಮೊದಲು ಶಿಕ್ಷೆಯಾಧಿಗಬೇಕು,’ ಎಂದೂ ದುರಾನಿ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ದಾಳಿಯ ಸಂದರ್ಭದಲ್ಲಿ ದುರಾನಿ ಅವರು ಪಾಕ್ ಸೇನೆಯ ಮೇಜರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಾಳಿ ವೇಳೆ ಬಂಧಿತನಾದ ಉಗ್ರ ಅಜ್ಮಲ್ ಕಸಬ್ ಪಾಕಿಸ್ತಾನಿ ಆಗಿರಲೂಬಹುದು ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ 2009ರಲ್ಲಿ ಅವರನ್ನು ವಜಾ ಮಾಡಲಾಗಿತ್ತು. ಬರೋಬ್ಬರಿ 166 ಮಂದಿಯನ್ನು ಬಲಿತೆಗೆದುಕೊಂಡ 2008ರ ಮುಂಬೈ ದಾಳಿಯಲ್ಲಿ ಪಾಕ್‌ನ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಭಾರತವು ಹೇಳುತ್ತಲೇ ಬಂದಿದೆ. ಆದರೆ, ಪಾಕಿಸ್ತಾನ ಮಾತ್ರ ಸಾಕ್ಷ್ಯಗಳ ಕೊರತೆಯ ನೆಪ ಹೇಳಿಕೊಂಡು ವಿಚಾರಣೆಯನ್ನು ವಿಳಂಬ ಮಾಡುತ್ತಿದೆ.
ಸರ್ಜಿಕಲ್ ದಾಳಿ ಬಗ್ಗೆ ಶಂಕೆ
ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದೆ ಎನ್ನಲಾದ ಸರ್ಜಿಕಲ್ ದಾಳಿಯ ಕುರಿತು ದುರಾನಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಶಿಬಿರಗಳ ಮೇಲೆ ಭಾರತೀಯ ಪಡೆಗಳು ಸರ್ಜಿಕಲ್ ದಾಳಿ ನಡೆಸಿರುವಂಥ ಯಾವುದೇ ಸುಳಿವು ಇಲ್ಲ. ಅದಕ್ಕೆ ಪುಷ್ಟಿ ನೀಡುವ ಸಾಕ್ಷ್ಯಗಳೂ ದೊರೆತಿಲ್ಲ,’ ಎಂದು ಹೇಳಿದ್ದಾರೆ. ಇದೇ ವೇಳೆ, ಭಾರತ-ಪಾಕ್ ನಡುವೆ ಉತ್ತಮ ಬಾಂಧವ್ಯದ ಅವಶ್ಯಕತೆಯನ್ನೂ ಅವರು ಒತ್ತಿಹೇಳಿದ್ದಾರೆ. ಭಾರತದೊಂದಿಗೆ ಸ್ನೇಹ ಇಲ್ಲದಿದ್ದರೆ ಪಾಕಿಸ್ತಾನವು ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ ಎಂದು ದುರಾನಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಒಪ್ಪಿಕೊಂಡ ವಿಚಾರಕ್ಕೆ ಕಾನೂನಾತ್ಮಕವಾಗಿ ಮೌಲ್ಯವಿಲ್ಲ. ಆದರೆ ಪಾಕಿಸ್ತಾನ ಏನೆಂಬ ವಿಚಾರವನ್ನು ಮತ್ತೂಮ್ಮೆ ಬಹಿರಂಗಗೊಳಿಸಿದೆ. ನೆರೆಯ ರಾಷ್ಟ್ರ ಉಗ್ರ ಕೃತ್ಯಗಳಿಗೆ ನೆರವು ನೀಡುವ ದೇಶದ ವಾದ ಪುಷ್ಟೀಕರಿಸಿದಂತಾಗಿದೆ.
– ಉಜ್ವಲ್ ನಿಕಂ, ಖ್ಯಾತ ನ್ಯಾಯವಾದಿ
ನೆರೆಯ ದೇಶದ ನಿವೃತ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೇಳಿದ್ದರಲ್ಲಿ ಹೊಸತೇನೂ ಇಲ್ಲ. ಭಾರತ ಹಿಂದಿನಿಂದ ಪ್ರತಿಪಾದಿಸುತ್ತಾ ಬಂದಿದ್ದನ್ನು ಅವರು ಹೇಳಿದ್ದಾರೆ.
– ಕಿರಣ್ ರಿಜಿಜು, ಕೇಂದ್ರ ಗೃಹ ಖಾತೆ ಸಹಾಯಕ ಸಚಿವ