Advertisement

ಕೃಷಿ ಭೂಮಿ ಹದಗೊಳಿಸುತ್ತಿದ್ದಾಗ 2,600 ಚಿನ್ನದ ನಾಣ್ಯ ನಿಧಿ ಪತ್ತೆ

01:52 AM Dec 06, 2019 | mahesh |

ಕಾಸರಗೋಡು: ತಿರುವನಂತ ಪುರದ ಕಿಳಮನ್ನೂರ್‌ನಲ್ಲಿ ಹೂತಿದ್ದ ರಾಜ ಮುದ್ರೆಯುಳ್ಳ 2,600 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಆರು ಕೋಟಿ ರೂ. ಮೊತ್ತದ ಕೇರಳ ಲಾಟರಿ ಬಂಪರ್‌ ಬಹುಮಾನ ಲಭಿಸಿದ್ದ ತಿರುವನಂತಪುರದ ಕಿಳಮನ್ನೂರ್‌ ನಿವಾಸಿ ರತ್ನಾಕರ ಪಿಳ್ಳೆ ಅವರಿಗೆ ಚಿನ್ನದ ನಾಣ್ಯಗಳ ನಿಧಿ ಲಭಿಸಿದ್ದರೂ, ಸರಕಾರದ ಪಾಲಾಗಿದೆ. 2018 ರಲ್ಲಿ ಕೇರಳ ಲಾಟರಿಯ ಕ್ರಿಸ್ಮಸ್‌ ಬಂಪರ್‌ನಲ್ಲಿ 6 ಕೋಟಿ ರೂ. ಬಹುಮಾನ ರತ್ನಾಕರ ಪಿಳ್ಳೆ ಅವರಿಗೆ ಲಭಿಸಿದ್ದು, ಈ ಮೊತ್ತದಿಂದ ಒಂದೂವರೆ ವರ್ಷಗಳ ಹಿಂದೆ ಕೀಯ್‌ಪೇರೂರ್‌ ತಿರುವಾಳ್‌ಕಡಲ್‌ ಶ್ರೀ ಕೃಷ್ಣ ಸ್ವಾಮಿ ದೇವಸ್ಥಾನ ಆಸುಪಾಸಿನಲ್ಲಿ 27 ಸೆಂಟ್ಸ್‌ ಸ್ಥಳ ಖರೀದಿಸಿದ್ದರು. ಲಾಟರಿ ಹಣದಿಂದ ಈ ಸ್ಥಳದಲ್ಲಿ ಕೃಷಿ ನಡೆಸಲು ಇಬ್ಬರು ಕಾರ್ಮಿಕರೊಂದಿಗೆ ಭೂಮಿ ಹದಗೊಳಿಸುತ್ತಿದ್ದಾಗ ಮಣ್ಣಿನಲ್ಲಿ ಹೂತು ಹಾಕಲಾಗಿದ್ದ ಮಣ್ಣಿನ ಕೊಡದಲ್ಲಿ ಚಿನ್ನದ ನಾಣ್ಯಗಳಿರುವ ನಿಧಿ ಪತ್ತೆಯಾಯಿತು. ರಾಜಮುದ್ರೆಯುಳ್ಳ 2,600 ಚಿನ್ನದ ನಾಣ್ಯಗಳು ಕೊಡದಲ್ಲಿದ್ದವು¤. ಈ ಚಿನ್ನ ಒಟ್ಟು 20 ಕಿಲೋ ತೂಗುತ್ತಿತ್ತು.

Advertisement

2,600 ಚಿನ್ನದ ನಾಣ್ಯಗಳಲ್ಲಿ ಕೆಲವು ನಾಣ್ಯಗಳು ಚಿತ್ತಿರ ತಿರುನಾಳ್‌ ಬಾಲರಾಮ ವರ್ಮ ಮಹಾರಾಜ ಹಾಗೂ ಇನ್ನು ಕೆಲವಲ್ಲಿ ಬಾಲರಾಮ ವರ್ಮ ಆಫ್‌ ಟ್ರಾವಂಕೂರ್‌ ಎಂದು ಇಂಗ್ಲಿಷ್‌ನಲ್ಲಿ ನಮೂದಿಸಲಾಗಿದೆ. ನಿಧಿ ಸಿಕ್ಕ ತತ್‌ಕ್ಷಣ ತನ್ನ ಫೇಸ್‌ಬುಕ್‌ನಲ್ಲಿ ಚಿನ್ನದ ನಾಣ್ಯಗಳ ಫೋಟೋಗಳನ್ನು ಪೋಸ್ಟ್‌ ಮಾಡಿದ್ದರು. ಅಲ್ಲದೆ ಕಿಳಿಮನ್ನೂರ್‌ ಪೊಲೀಸ್‌ ಠಾಣೆಗೂ ಮಾಹಿತಿ ನೀಡಿದ್ದರು. ಇದರಂತೆ ಸ್ಥಳಕ್ಕೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವಶಪಡಿಸಿಕೊಂಡಿದ್ದಾರೆ. ಸಿಕ್ಕ ನಾಣ್ಯಗಳಲ್ಲಿ ಬಹುತೇಕ ನಾಣ್ಯಗಳು ಕಿಲುಬು ಹಿಡಿದಿದ್ದು, ಅಕ್ಷರಗಳ ಗುರುತು ಹಿಡಿಯಲು ಅಸಾಧ್ಯವಾಗಿದೆ. ಪರೀಕ್ಷೆಯಿಂದ ಈ ನಾಣ್ಯಗಳ ಕಾಲಾವಧಿ ಮತ್ತು ಯಾರಿಗೆ ಸಂಬಂಧಿಸಿದ್ದು ಎಂದು ತಿಳಿಯಲು ಸಾಧ್ಯ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇತಿಹಾಸ ಸಂಶೋಧನೆ
ಇಲ್ಲಿ ಲಭಿಸಿದ ಚಿನ್ನದ ನಾಣ್ಯಗಳು ಶತಮಾನಗಳ ಇತಿಹಾಸವಿರುವ ತಿರುವಾಳ್‌ಕಡಲ್‌ ಶ್ರೀಕೃಷ್ಣ ಸ್ವಾಮಿ ದೇವಸ್ಥಾನ ಮತ್ತು ಕವಡಿಯಾರ್‌ ಅರಮನೆಗೆ ಸಂಬಂಧಿಸಿರುವ ಸಾಧ್ಯತೆಗಳಿವೆ ಎಂದು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಈ ಸ್ಥಳದಲ್ಲಿ ಹೆಚ್ಚಿನ ಉತVನನ ಅಥವಾ ಸಂಶೋಧನೆ ನಡೆಸಿದಲ್ಲಿ ಇನ್ನಷ್ಟು ಮಾಹಿತಿಗಳು, ಪ್ರಾಚ್ಯ ವಸ್ತುಗಳು ಲಭಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next