ಬೆಂಗಳೂರು: ವಿದೇಶಗಳಲ್ಲಿ ಕೆಲಸ ಕೊಡಿಸುವುದಾಗಿ ಕರೆಸಿಕೊಂಡು ಬಾಂಗ್ಲಾ, ಮತ್ತಿತರ ದೇಶದ ಪ್ರಜೆಗಳನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪಿಗಳು, ಬಾಂಗ್ಲಾದೇಶದ ಯುವಕರಿಂದ 26 ಲಕ್ಷ ರೂ. ಹಣ ಸುಲಿಗೆ ಮಾಡಿರುವುದು ಸಿಐಡಿ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಚಿಕ್ಕಜಾಲದ ಕೋಳಿಪುರದಲ್ಲಿ ರಕ್ಷಿಸಲಾದ ಬಾಂಗ್ಲಾದೇಶದ ಸರ್ದಾರ್ ಹುಸೇನ್, ಮೊಹಮ್ಮದ್ ಮುಷಫ್, ಶಕೀಲ್ ಮತ್ತು ಸುನಂಮುಂಚಿಯಿಂದ ಆರೋಪಿಗಳು 26 ಲಕ್ಷ ರೂ. ಪಡೆದುಕೊಂಡಿದ್ದರು. ಅಲ್ಲದೆ, ಆರೋಪಿಗಳು ಕೃತ್ಯವೆಸಗಲು, ತರಕಾರಿ ವ್ಯಾಪಾರಕ್ಕೆಂದು ಸುಳ್ಳು ಹೇಳಿ ಚಿಕ್ಕಜಾಲದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದುಕೊಂಡಿದ್ದರು.
ಅಶ್ವಕ್ ಅಲಿಯಾಸ್ ಚಾನ್‌ಖಾನ್ ಎಂಬಾತ ಈ ಮನೆಯನ್ನು ಬಾಡಿಗೆ ಪಡೆದುಕೊಂಡಿದ್ದ. ಅದೇ ಮನೆಯಲ್ಲಿ ಬಾಂಗ್ಲಾ ಯುವಕರನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿ ಇವರ ಸಂಬಂಧಿಕರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ವಶದಲ್ಲಿರುವ ಬಾಂಗ್ಲಾದೇಶದ ಯುವಕರ ಪೋಷಕರು ಮತ್ತು ಸಂಬಂಧಿಕರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಇವರ ವೀಸಾ, ಪಾಸ್‌ಪೋರ್ಟ್ ಹಾಗೂ ದಾಖಲೆಗಳನ್ನು ಆರೋಪಿಗಳು ಕಸಿದುಕೊಂಡಿದ್ದು, ಇದೀಗ ಈ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಕಾನೂನು ಪ್ರಕ್ರಿಯೆ ಬಳಿಕ ಯುವಕರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗುತ್ತದೆ ಎಂದು ಅಧಿಕಾರಿ ಹೇಳಿದರು.
ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವೆಬ್‌ಸೈಟ್‌ಗಳ ಮೂಲಕ ಬಾಂಗ್ಲಾ ಹಾಗೂ ಇತರೆ ದೇಶಗಳಿಂದ ಯುವಕರನ್ನು ಕರೆಸಿಕೊಂಡು ಸುಲಿಗೆ ಮಾಡುತ್ತಿದ್ದ ಮುಂಬೈ ಮೂಲದ ಕಿಂಗ್‌ಪಿನ್ ಸೇರಿ 16 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.