ಮುಂಬಯಿ, ಡಿ. 26: ಒಂದೆಡೆ ಕೋವಿಡ್ ಸೋಂಕನ್ನು ಹತೋಟಿಗೆ ತರಲು ಮುಂಬಯಿ ಮಹಾನಗರ ಪಾಲಿಕೆಯ ಹಗಲಿರುಳು ಶ್ರಮಿಸುತ್ತಿದ್ದರೆ, ಇನ್ನೊಂದೆಡೆ ಮಾಸ್ಕ್ ಧರಿಸದೆ ತಿರುಗಾಡುವವರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿರುವುದು ಮುಂಬಯಿ ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ನಗರದ ವಿವಿಧ ವಾರ್ಡ್‌ಗಳಿಂದ ಪ್ರತಿದಿನ 24,000ಕ್ಕೂ ಹೆಚ್ಚು ಮಂದಿಗೆ ಮುಂಬಯಿ ಮನಪಾವು ದಂಡ ವಿಧಿಸುತ್ತಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಗುರಿಯ ಶೇ. 55ರಿಂದ ಶೇ. 60ರಷ್ಟು ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ವೈರಸ್ ವಿರುದ್ಧ ರಕ್ಷಣಾತ್ಮಕ ಸಾಧನಗಳಿಲ್ಲದೆ ಹೊರಗಡೆ ತಿರುಗಾಡುತ್ತಿದ್ದ 13,235 ಮಂದಿಯಿಂದ ಬಿಎಂಸಿ 26.47 ಲಕ್ಷ ರೂ. ಗಳ ದಂಡವನ್ನು ಶುಕ್ರವಾರ ಒಂದೇ ದಿನ ಸಂಗ್ರಹಿಸಿದೆ. ಮಾರ್ಚ್‌ನಲ್ಲಿಕೊರೊನಾ ಸೋಂಕು ಹರಡಿದ ಬಳಿಕ ಮಾಸ್ಕ್ ಧರಿಸದೆ ತಿರುಗಾಡಿ ದಂಡಕ್ಕೆ ಗುರಿಯಾದವರ ಸಂಖ್ಯೆ 8.33 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ 8 ಕೋಟಿ ರೂ. ಗಳ ದಂಡ ಸಂಗ್ರಹಿಸಲಾಗಿದ್ದು, ಈ ವರೆಗೆ ಮುಂಬಯಿ ಮಹಾನಗರ ಪಾಲಿಕೆಯು 17 ಕೋ. ರೂ. ಗಳ ದಂಡ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ವಾರಗಳಲ್ಲಿ ನಗರವು ಕೋವಿಡ್ ಪ್ರಕರಣಗಳಲ್ಲಿ ಏರಿಕೆಯನ್ನು ದಾಖಲಿಸಿಲ್ಲವಾದರೂ, ಯುಕೆಯಲ್ಲಿ ವೇಗವಾಗಿ ಹರಡುವ ರೋಪಾಂತರಿತ ಸೋಂಕಿನಿಂದ ಎಚ್ಚೆತ್ತುಕೊಂಡಿರುವ ಬಿಎಂಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯರಾತ್ರಿ ನಮ್ಮ ಮಾರ್ಷಲ್‌ಗಳು ನಿಯಮಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಅವರು ನಾಗರಿಕರಿಂದಲೂ ಕಿರುಕುಳಕ್ಕೊಳಗಾಗುತ್ತಿದ್ದಾರೆ. ಕೆಲವು ಮಾರ್ಷಲ್‌ಗಳ ವಿರುದ್ಧ ನಾಗರಿಕರು ಹಲ್ಲೆ ಮಾಡಿರುವ ಪ್ರಕರಣಗಳೂ ಇವೆ.
ನಾಗರಿಕ ಮುಖ್ಯಸ್ಥ ಇಕ್ಬಾಲ್ ಸಿಂಗ್ ಚಾಹಲ್ ಅವರು ರಸ್ತೆಗಳು, ಮಾರುಕಟ್ಟೆಗಳು ಮತ್ತು ಉದ್ಯಾನವನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ಗಳಿಲ್ಲದೆ ಸಂಚರಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ತಂಡಕ್ಕೆ ನಿರ್ದೇಶಿಸಿದ ಬಳಿಕ ಸೆಪ್ಟಂಬರ್‌ನಿಂದ ಅಭಿಯಾನವನ್ನು ಪ್ರಾರಂಭಿಸಲಾಯಿತು. ನವೆಂಬರ್‌ನಿಂದ ಅಭಿಯಾನಕ್ಕೆ ಮತ್ತಷ್ಟು ಚುರುಕು ನೀಡಲಾಯಿತು. ಮಾರ್ಷಲ್‌ಗಳ ಹೊರತಾಗಿ ಮುಂಬಯಿಯಾದ್ಯಂತ ಬಿಎಂಸಿ ಅಧಿಕಾರಿಗಳನ್ನು ನಿಯೋಜಿಸಿದೆ.
ಮಾಸ್ಕ್ ಧರಿಸುವುದು ಅತ್ಯಗತ್ಯ :
ನಾಅಗರಿಕರು ನಮ್ಮೊಂದಿಗೆ ಸಹಕರಿಸುವುದು ಮತ್ತು ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದು ಮುಖ್ಯವಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿ ಹೇಳಿದ್ದಾರೆ. ಅಂಧೇರಿ, ಜೋಗೇಶ್ವರಿ ಮತ್ತು ವಿಲೇ ಪಾರ್ಲೆ ವೆಸ್ಟ್ ಅನ್ನು ಒಳಗೊಂಡಿರುವ ಕೆ ವೆಸ್ಟ್ ವಾರ್ಡ್‌ನಲ್ಲಿ ಅತೀ ಹೆಚ್ಚು 55,232 ಪ್ರಕರಣಗಳು ದಾಖಲಾಗಿವೆ. ಎಲ್ ವಾರ್ಡ್‌ನಲ್ಲಿರುವ ಕುರ್ಲಾದಲ್ಲಿ 48,450 ಪ್ರಕರಣಗಳು ಮತ್ತು ಕೆ ಈಸ್ಟ್ ವಾರ್ಡ್‌ನಲ್ಲಿರುವ ಅಂಧೇರಿ, ವಿಲೇ ಪಾರ್ಲೆ ಮತ್ತು ಜೋಗೇಶ್ವರಿ ಪೂರ್ವದ ಕೆಲವು ಭಾಗಗಳಲ್ಲಿ 48,366 ಪ್ರಕರಣಗಳು, ಭಾಂಡೂಪ್ ಪ್ರದೇಶಗಳನ್ನು ಒಳಗೊಂಡಿರುವ ಎಸ್ ವಾರ್ಡ್‌ನಲ್ಲಿ 47,180 ಪ್ರಕರಣಗಳನ್ನು ದಾಖಲಿಸಲಾಗಿದೆ.