ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು G20 ಟೂರಿಸಂ ವರ್ಕಿಂಗ್ ಗ್ರೂಪ್ (TWG) ಕಾನ್ಫರೆನ್ಸ್ ಪ್ರವಾಸವನ್ನು ಭದ್ರತಾ ಕಾರಣಗಳಿಂದಾಗಿ ಕೊನೆ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಿದ್ದು, ಗುಲ್ಮಾರ್ಗ್‌ನಲ್ಲಿ G20 ಸಮಯದಲ್ಲಿ ಪಾಕಿಸ್ಥಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಇಚ್ಛೆಯ ಮೇರೆಗೆ 26/11 ಮಾದರಿಯ ದಾಳಿಯನ್ನು ನಡೆಸಲು ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿವೆ ಎಂದು ಶಂಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಐಷಾರಾಮಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬಂಧಿತ ಓವರ್-ಗ್ರೌಂಡ್ ವರ್ಕರ್ (OGW) ಬಹಿರಂಗಪಡಿಸಿದ ನಂತರ ಬದಲಾವಣೆಗಳನ್ನು ಮಾಡಲಾಗಿದೆ. ಜಿ 20 ಸ್ಥಳದ ಸುತ್ತ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ಈ ಮಧ್ಯೆ ಕಾಶ್ಮೀರ ಪೊಲೀಸರು ಕಣಿವೆಯಲ್ಲಿ ಜಿ20 ಸಭೆಯ ಬಗ್ಗೆ ವದಂತಿಗಳನ್ನು ಹರಡಲು ಅನುಮಾನಾಸ್ಪದ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳ ವಿರುದ್ಧ ಸಾರ್ವಜನಿಕ ಸಲಹೆಯನ್ನು ನೀಡಿದ್ದಾರೆ.
ಜಿ-20 ಗೆ ಮುನ್ನ ದಮನ ಕಾರ್ಯಾಚರಣೆಯ ಭಾಗವಾಗಿ ಎಪ್ರಿಲ್ ಕೊನೆಯ ವಾರದಲ್ಲಿ ಭದ್ರತಾ ಪಡೆಗಳು ಫಾರೂಕ್ ಅಹ್ಮದ್ ವಾನಿಯನ್ನು ಬಂಧಿಸಿದ್ದವು. ಬಾರಾಮುಲ್ಲಾದ ಹೈಗಮ್ ಸೋಪೋರ್ ನಿವಾಸಿ ವಾನಿ ಗುಲ್ಮಾರ್ಗ್‌ನ ಪ್ರಸಿದ್ಧ ಪಂಚತಾರಾ ಹೋಟೆಲ್‌ನಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ. ಮೂಲಗಳ ಪ್ರಕಾರ, ಆತ ಒಜಿಡಬ್ಲ್ಯೂ ಆಗಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಮತ್ತು ಗಡಿಯುದ್ದಕ್ಕೂ ಐಎಸ್ಐ ಅಧಿಕಾರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದ.
ಶ್ರೀನಗರದಲ್ಲಿ ಮೇ 22 ರಿಂದ 24 ರವರೆಗೆ ನಡೆಯಲಿರುವ ಮೂರನೇ ಜಿ 20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಜಿ 20 ಪ್ರೆಸಿಡೆನ್ಸಿಯ ಮುಖ್ಯ ಸಂಯೋಜಕ ಹರ್ಷ್ ವರ್ಧನ್ ಶ್ರಿಂಗ್ಲಾ ಮಾತನಾಡಿ “ಈ G20 ಸಭೆಯು ಕಣಿವೆಯಲ್ಲಿ ಪ್ರವಾಸೋದ್ಯಮದ ಪುನರುಜ್ಜೀವನಕ್ಕೆ ಸಹಾಯ ಮಾಡುತ್ತದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಅತ್ಯಂತ ಮಹತ್ವದ ಸಭೆಯಾಗಿದೆ” ಎಂದು ಹೇಳಿದ್ದಾರೆ.