ಬರ್ಮಿಂಗ್‌ಹ್ಯಾಮ್: ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಶತಕ ಬಾರಿಸಿ ತಂಡದ ರಕ್ಷಣೆಗೆ ನಿಂತಿದ್ದಾರೆ. ಈ ಸಾಧನೆಯ ವೇಳೆ ಕ್ರಿಕೆಟ್ ದಂತಕತೆ ಸರ್ ಡಾನ್ ಬ್ರಾಡ್‌ಮನ್ ಅವರ ಅನಂತರದ ಸ್ಥಾನವನ್ನು ಅಲಂಕರಿಸಿದ್ದಾರೆ. ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್ ಬಾರಿಸಿದ್ದ ಸ್ಮಿತ್, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಪ್ರಚಂಡ ಬ್ಯಾಟಿಂಗ್ ಮುಂದುವರಿಸಿ 142 ರನ್ ಹೊಡೆದರು. 4ನೇ ದಿನದಾಟದ ಚಹಾ ವಿರಾಮದ ವೇಳೆ ಆಸ್ಟ್ರೇಲಿಯ 5 ವಿಕೆಟಿಗೆ 356 ರನ್ ಮಾಡಿತು. ವೇಡ್ 86 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದು ಸ್ಮಿತ್ ಅವರ 25ನೇ ಟೆಸ್ಟ್ ಶತಕ. ಇದಕ್ಕಾಗಿ 119 ಇನ್ನಿಂಗ್ಸ್ ತೆಗೆದು ಕೊಂಡರು. ಇನ್ನಿಂಗ್ಸ್ ಲೆಕ್ಕಾಚಾರದಲ್ಲಿ ಇದು 2ನೇ ಅತೀ ವೇಗದ 25 ಶತಕಗಳ ದಾಖಲೆ. ಈ ಸಂದರ್ಭದಲ್ಲಿ 127 ಇನ್ನಿಂಗ್ಸ್‌ಗಳಿಂದ
25 ಶತಕ ಹೊಡೆದ ವಿರಾಟ್ ಕೊಹ್ಲಿ ದಾಖಲೆ ಪತನಗೊಂಡಿತು. ಬ್ರಾಡ್‌ಮನ್ ಕೇವಲ 68 ಇನ್ನಿಂಗ್ಸ್‌ಗಳಲ್ಲಿ 25 ಸೆಂಚುರಿ ಬಾರಿಸಿದ್ದು ವಿಶ್ವದಾಖಲೆಯಾಗಿ ಉಳಿದಿದೆ. ಸಚಿನ್ ತೆಂಡುಲ್ಕರ್ ಇದಕ್ಕಾಗಿ 130 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಇದೇ ವೇಳೆ ಸ್ಮಿತ್ ಆ್ಯಶಸ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯದ 5ನೇ ಬ್ಯಾಟ್ಸ್‌ಮನ್ ಎನಿಸಿದರು.
ಸ್ಮಿತ್ ಮೊದಲ ಇನ್ನಿಂಗ್ಸ್‌ನಲ್ಲಿ 24ನೇ ಶತಕ ಬಾರಿಸುವಾಗಲೂ ಕೊಹ್ಲಿ ದಾಖಲೆಯನ್ನು ಮುರಿದಿದ್ದರು (118ನೇ ಇನ್ನಿಂಗ್ಸ್). ಕೊಹ್ಲಿ ಇದಕ್ಕಾಗಿ 123 ಇನ್ನಿಂಗ್ಸ್ ತೆಗೆದುಕೊಂಡಿದ್ದರು.