Advertisement

2,500 ಗ್ರಾಮ ಪಂಚಾಯತ್‌ ನೌಕರರ ಕೆಲಸಕ್ಕೆ ಕತ್ತರಿ

06:30 AM Mar 24, 2019 | Vishnu Das |

ಮಂಗಳೂರು: ಕೆಲವು ಗ್ರಾಮ ಪಂಚಾಯತ್‌ಗಳು ತಮ್ಮ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆ ನಿರ್ಣಯಗಳ ಮೂಲಕ ಮಾಡಿಕೊಳ್ಳಲಾಗಿರುವ ವಿವಿಧ ನೌಕರರ ನೇಮಕಾತಿಯನ್ನು ರದ್ದುಪಡಿಸುವಂತೆ ರಾಜ್ಯ ಸರಕಾರ ಆದೇಶಿಸಿದೆ.

Advertisement

ಇದಷ್ಟೇ ಅಲ್ಲ, ಇಂಥ ನೇಮಕಕ್ಕೆ ಅವಕಾಶ ಕೊಟ್ಟ ಪಿಡಿಒ, ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಕ್ರಮ ಜರಗಿಸುವಂತೆಯೂ ನಿರ್ದೇಶಿಸಿದೆ. ಇದರಿಂದ ಜಿ.ಪಂ. ಪೂರ್ವಾನುಮತಿ ಪಡೆಯದೆ ನೇಮಕಗೊಂಡ ರಾಜ್ಯದ ಸುಮಾರು 2,500 ನೌಕರರು ಕೆಲಸ ಕಳೆದುಕೊಳ್ಳುವಂತಾಗಿದೆ.

ಗ್ರಾ.ಪಂ.ಗಳು ಯಾವುದೇ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿ 2018ರ ಮಾ.12ರಂದು ಸರಕಾರ ಆದೇಶಿಸಿತ್ತು. ಒಂದು ವೇಳೆ ಬಿಲ್‌ ಕಲೆಕ್ಟರ್‌, ಕ್ಲರ್ಕ್‌/ಡಾಟಾ ಎಂಟ್ರಿ ಆಪರೇಟರ್‌ ಮತ್ತು ಅಟೆಂಡರ್‌ ಹುದ್ದೆಗಳು ನಿವೃತ್ತಿ, ಮುಂಬಡ್ತಿ ಮತ್ತು ಇನ್ನಿತರ ಕಾರಣಗಳಿಂದ ಖಾಲಿಯಾದಲ್ಲಿ ನೇಮಿಸಿಕೊಳ್ಳಲು ಸೂಕ್ತ ಕಾರಣದೊಂದಿಗೆ ಜಿ.ಪಂ. ಸಿಇಒ ಪೂರ್ವಾನುಮೋದನೆ ಪಡೆಯಬೇಕು.

ಸಾಮಾನ್ಯವಾಗಿ ಗ್ರಾ.ಪಂ.ಗಳಲ್ಲಿ ಕ್ಲರ್ಕ್‌, ಬಿಲ್‌ ಕಲೆಕ್ಟರ್‌, ಅಟೆಂಡರ್‌, ಸ್ವತ್ಛತಾಗಾರ, ಪಂಪ್‌ ಚಾಲಕರು, ಪಂಪ್‌ ನಿರ್ವಾಹಕ ಹುದ್ದೆಗಳಿವೆ. ಇವುಗಳಿಗೆ ನೇಮಕ ಮಾಡಿಕೊಳ್ಳಬೇಕಿದ್ದರೆ ಸೂಕ್ತ ಕಾರಣಗಳೊಂದಿಗೆ ಸಂಬಂಧಪಟ್ಟ ಜಿ.ಪಂ. ಸಿಇಒ ಅವರನ್ನು ಕೋರಬೇಕು.

ಇಲ್ಲಿ ಪೂರ್ವಾನುಮೋದನೆ ಪಡೆದ ಬಳಿಕ ಪತ್ರಿಕಾ ಪ್ರಕಟನೆ ಸಹಿತ ವಿವಿಧ ನಿಯಮಾವಳಿ ಅನುಸರಿಸಿ ಆಯಾ ಗ್ರಾ.ಪಂ.ನವರು ಹುದ್ದೆ ಭರ್ತಿಗೆ ಆಯ್ಕೆ ನಡೆಸಬಹುದು. ಇದನ್ನು ಜಿ.ಪಂ. ಗಮನಕ್ಕೆ ತರಬೇಕು. ಆದರೆ ಕೆಲವು ಗ್ರಾ.ಪಂ.ಗಳಲ್ಲಿ ಈ ನಿಯಮಾವಳಿ ಪಾಲಿಸದೆ ಗ್ರಾ.ಪಂ.ನಲ್ಲಿಯೇ ನೌಕರರ ನೇಮ ಕಾತಿಗೆ ನಿರ್ಧರಿಸಲಾಗುತ್ತದೆ. ಇದು ಕಾನೂನುಬಾಹಿರ ಎಂದು ಸರಕಾರ ಸ್ಪಷ್ಟಪಡಿಸಿದೆ.

Advertisement

ಈ ನಿರ್ದೇಶನಗಳನ್ನು ಉಲ್ಲಂ ಸಿ ಅನಧಿಕೃತ ನೇಮಕ ಮಾಡಿಕೊಳ್ಳುವ ಗ್ರಾ.ಪಂ. ಪಿಡಿಒ ವಿರುದ್ಧ ಕರ್ನಾಟಕ ಸಿವಿಲ್‌ ಸೇವಾ (ಸಿಸಿಎ) ನಿಯಮಗಳು 1957ರನ್ವಯ ಹಾಗೂ ಭಾಗಿಯಾದ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂ.ರಾಜ್‌ ಅಧಿನಿಯಮದ ಅನ್ವಯ ಕ್ರಮ ಜರಗಿಸಲಾಗುತ್ತದೆ. ಯಾವುದೇ ಹಂತದಲ್ಲಿ ಲೋಪವಾದಲ್ಲಿ ಪಿಡಿಒ ಮತ್ತು ಸಂಬಂಧಪಟ್ಟ ತಾ.ಪಂ. ಸಿಇಒಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದೆ.

ಕೆಲವು ಗ್ರಾ.ಪಂ.ನಲ್ಲಿ  ಜಿ.ಪಂ. ಗಮನಕ್ಕೆ ಬಾರದೆ, ನಿಯಮ ಉಲ್ಲಂಘಿಸಿ ನೇಮಕಾತಿ ನಡೆಸಲಾಗುತ್ತಿದೆ. ದ.ಕ. ಜಿಲ್ಲೆಯ 2 ಗ್ರಾ.ಪಂ.ಗಳಲ್ಲಿ ಇಂತಹ ಪ್ರಕರಣ ಗಳು ನಡೆದಿದ್ದು, ಸಂಬಂಧಪಟ್ಟ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.
– ಡಾ| ಆರ್‌. ಸೆಲ್ವಮಣಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ

ಯಾವುದೇ ನೌಕರರನ್ನು ಕೆಲಸದಿಂದ ತೆಗೆಯಬಾರದು. ಅವರಿಗೆ ಉದ್ಯೋಗ ಭದ್ರತೆಯನ್ನು ನೀಡಬೇಕು. ಸರಕಾರದ ನಿಯಮ ಗೊತ್ತಿದ್ದೂ ಅದನ್ನು ಉಲ್ಲಂಘಿಸಿ ನೇಮಕ ನಿರ್ಣಯ ಕೈಗೊಂಡ ವರ ವಿರುದ್ಧ  ಕ್ರಮ ಕೈಗೊಳ್ಳಬೇಕು.
– ದೇವೀಪ್ರಸಾದ್‌ ಬೊಳ್ಮ
ಕರ್ನಾಟಕ ರಾಜ್ಯ ಗ್ರಾ.ಪಂ. ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next