ಬೆಂಗಳೂರು: ಕರ್ನಾಟಕವು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದರ ಜತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಇದುವರೆಗೆ 2,500 ಕೋಟಿ ರೂ. ಆದಾಯ ಗಳಿಸಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಹೆಚ್ಚುವರಿ ವಿದ್ಯುತ್ ಅನ್ನು ವಿವಿಧ ಕಂಪೆನಿಗಳು ಮತ್ತು ಹೊರರಾಜ್ಯಗಳಿಗೂ ಮಾರಾಟ ಮಾಡಲಾಗಿದ್ದು, ಇದುವರೆಗೆ ಈ ಮೂಲದಿಂದ 2,500 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಹೇಳಿದರು.
ವಿದ್ಯುತ್ ಉತ್ಪಾದನೆ ಹೆಚ್ಚಳದ ಬೆನ್ನಲ್ಲೇ ಬೇಡಿಕೆ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಕಳೆದ ಫೆಬ್ರವರಿಯಲ್ಲಿ ಗರಿಷ್ಠ ಬೇಡಿಕೆ 14,741 ಮೆ.ವಾ. ದಾಖಲಾಗಿದೆ. ಆದಾಗ್ಯೂ ರಾಜ್ಯದಲ್ಲಿ ಯಾವುದೇ ರೀತಿಯ ವಿದ್ಯುತ್ ಕಡಿತ ಮಾಡಿಲ್ಲ. ನಿರಂತರ ಪೂರೈಕೆ ಮಾಡಲಾಗುತ್ತಿದೆ ಎಂದರು.
ಸುಟ್ಟು ಹೋದ 24 ಗಂಟೆಗಳಲ್ಲಿ ಹೊಸ ಟಿಸಿ
ಬಿಜೆಪಿ ಸದಸ್ಯ ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನಿಲ್ ಕುಮಾರ್, ವಿದ್ಯುತ್ ಪರಿವರ್ತಕ (ಟಿಸಿ)ಗಳು ಸುಟ್ಟು ಹೋದರೆ, 24 ಗಂಟೆಗಳಲ್ಲಿ ಬದಲಾಯಿಸಲಾಗುತ್ತಿದೆ. ಶೇ. 90ರಷ್ಟು ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದುೂ ಹೇಳಿದರು.
ಇನ್ನು ನೀರಾವರಿ ಪಂಪ್‌ಸೆಟ್‌ಗಳಿಗೆ ಟಿಸಿ ಅಳವಡಿಕೆಯು ಆಯಾ ಅರ್ಜಿ ಸಲ್ಲಿಕೆಯ “ಸೀನಿಯಾರಿಟಿ’ ಆಧಾರದ ಮೇಲೆ ಒದಗಿಸಲಾಗುವುದು. ರಾಜ್ಯಕ್ಕೆ ಬೇಕಾಗುವ ವಿದ್ಯುತ್ ಪರಿವರ್ತಕಗಳನ್ನು ಸರ್ಕಾರದ ಕರ್ನಾಟಕ ವಿದ್ಯುಚ್ಚಕ್ತಿ ಕಾರ್ಖಾನೆಯೇ ಪೂರೈಸುತ್ತಿದೆ. ಅಗತ್ಯಬಿದ್ದರೆ, ಖಾಸಗಿ ಮೊರೆಹೋಗುತ್ತೇವೆ ಎಂದ ಅವರು, ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ 22 ಕಿಲೋ ವ್ಯಾಟ್ ಸಾಮರ್ಥಯದ ಪರಿವರ್ತಕ ಒದಗಿಸಲು ಮಾರ್ಗಸೂಚಿಗಳನ್ನು ಸರ್ಕಾರ ಅನುಸರಿಸಲಾಗುತ್ತಿದೆ. ಹೊಸದಾಗಿ ಅರ್ಜಿ ನೋಂದಾಯಿಸುವ ರೈತರು 10 ಸಾವಿರ ಮತ್ತು ಇತರೆ ಶುಲ್ಕವನ್ನು ಪಾವತಿಸಿದ ಬಳಿಕ ಅವಶ್ಯಕತೆಗೆ ಅನುಗುಣವಾಗಿ ವಿದ್ಯುತ್ ಪರಿವರ್ತಕ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.