Advertisement

ಬೋಯಿಂಗ್ ಇಂಡಿಯಾ ಸಂಸ್ಥೆಯಿಂದ ಕಲಬುರಗಿಯಲ್ಲಿ 250 ಆಕ್ಸಿಜನ್ ಬೆಡ್ ಗಳ ಆಸ್ಪತ್ರೆ ನಿರ್ಮಾಣ

07:15 PM May 08, 2021 | sudhir |

ಕಲಬುರಗಿ: ಕೋವಿಡ್ ಎರಡನೇ ಅಲೆಯಿಂದ ರಾಜ್ಯದಲ್ಲಿ ಸೃಷ್ಠಿಯಾಗಿರುವ ಆಕ್ಸಿಜನ್ ಬೆಡ್ ಕೊರತೆ ನಿವಾರಣೆ ನಿಟ್ಟಿನಲ್ಲಿ ಬೋಯಿಂಗ್ ಇಂಡಿಯಾ ಸಂಸ್ಥೆ‌ ಮುಂದೆ ಬಂದಿದ್ದು, ಕಲಬುರಗಿ ಜಿಲ್ಲೆಯಲ್ಲಿ 250 ಆಕ್ಸಿಜನ್ ಬೆಡ್ ಆಸ್ಪತ್ರೆ ಸ್ಥಾಪಿಸಲು‌ ಸಂಸ್ಥೆ ಮಂಜೂರಾತಿ‌ ನೀಡಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

Advertisement

ನಗರದ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದೇ‌ ಸಂಸ್ಥೆಯಿಂದ ಬೆಂಗಳೂರಿನ ಯಲಹಂಕದಲ್ಲಿಯೂ 200 ಆಕ್ಸಿಜನ್ ಬೆಡ್ ಸ್ಥಾಪಿಸಲಾಗುತ್ತಿದೆ. ಕಲಬುರಗಿ ಆಸ್ಪತ್ರೆಯ ಸ್ಥಾಪನೆಗೆ ನಾಳೆಯಿಂದಲೇ ಸ್ಥಳ ಪರಿಶೀಲನೆ ನಡೆಸಿ, ಶೀಘ್ರ ಕಾಮಗಾರಿ ಆರಂಭಿಸಲಾಗುವುದು.‌ ಆರು ತಿಂಗಳಲ್ಲಿ ಈ ಆಸ್ಪತ್ರೆಯನ್ನು ಮುಗಿಸುವ ಗುರಿ ಹೊಂದಲಾಗಿದೆ ಎಂದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕ್ಸಿಜನ್ ಬೇಡಿಕೆ ಹೆಚ್ಚುತ್ತಿದೆ.‌ ಆರಂಭದಲ್ಲಿ 10 ಕೆಎಲ್ ಆಕ್ಸಿಜನ್ ಬಳಕೆ ಆಗುತ್ತಿತ್ತು. ಈಗ 15ರಿಂದ 25 ಕೆಎಲ್ ಆಕ್ಸಿಜನ್ ಗೆ ಬೇಡಿಕೆ ಬರುತ್ತಿದೆ. ಮುಂದೆ 30 ಕೆಎಲ್ ಆಕ್ಸಿಜನ್ ಅವಶ್ಯಕತೆ ಆಗಲಿದೆ. ಜಿಲ್ಲೆಗೆ ವಿವಿಧ ಮೂಲಗಳಿಂದ ಆಕ್ಸಿಜನ್ ಲಭ್ಯವಿದೆಯಾದರೂ ಆಮದು ಮಾಡಿಕೊಳ್ಳಲು ಆಕ್ಸಿಜನ್ ತುಂಬಿಕೊಂಡಿ ಬರುವ ಆಕ್ಸಿಜನ್ ಕಂಟೇನರ್ ಇಲ್ಲದಿರುವುದು ತೊಂದರೆಕ್ಕೀಡು ಮಾಡಿದೆ. ಹೊಸ ಆಕ್ಸಿಜನ್ ಟ್ಯಾಂಕರ್ ಗಳು ಈಗಾಗಲೇ ಬಳ್ಳಾರಿ ಜಿಲ್ಲೆಗೆ ಬಂದಿದ್ದು, ಇನ್ನೆರಡು ದಿನಗಳ ಈ ಆಕ್ಸಿಜನ್ ಟ್ಯಾಂಕರ್ ಗಳು ಜಿಲ್ಲೆಗೆ ಬರಲಿವೆ ಎಂದು ಹೇಳಿದರು.

ಇದನ್ನೂ ಓದಿ :ಕೋವಿಡ್ ವಾರ್ಡ್ ನಲ್ಲಿ ಗಂಟೆಗಟ್ಟಲೇ ಇರಿಸಿದ ಶವ : ಸೋಂಕಿತರಲ್ಲಿ ಆತಂಕ

ಆಕ್ಸಿಜನ್‌ ಸಮಸ್ಯೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಲು ಪ್ರಾಯೋಗಿಕವಾಗಿ ಜಿಲ್ಲೆಗೆ 100 ಆಕ್ಸಿಜನ್ ಕಾನ್ಸ‌ಂಟ್ರೇಟರ್ ಖರೀದಿಸಿದ್ದು, ಇದೇ ಸೋಮವಾರ ಕಲಬುರಗಿಗೆ ತಲುಪಲಿವೆ. ತಲಾ‌ ಇಬ್ಬರು ರೋಗಿಗಳಿಗೆ ಒಂದು ಕಾನ್ಸಂಟ್ರೇಟರ್ ದಿಂದ ಆಕ್ಸಿಜನ್ ಪೂರೈಸಬಹುದಾಗಿದೆ. ಮುಂದಿನ ದಿನಗಳಲ್ಲಿ‌ ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದು, ಕೇಂದ್ರ ಸರ್ಕಾರದಿಂದಲೂ 3,000 ಕಾನ್ಸಂಟ್ರೇಟರ್ ಬರಲಿವೆ ಎಂದು ಮಾಹಿತಿ ನೀಡಿದರು.

Advertisement

ಜಿಲ್ಲೆಯಲ್ಲಿ ಒಟ್ಟಾರೆಯಾಗಿ 1600 ಕೋವಿಡ್ ಬೆಡ್ ಗಳಿವೆ. ಜಿಲ್ಲೆಯಲ್ಲಿನ ಸಕ್ರಿಯ ಸೋಂಕಿತರ ಪೈಕಿ ಆಕ್ಸಿಜನ್ ಬೆಡ್ ಮೇಲೆ‌ 440 ಮತ್ತು ಐಸಿಯುನಲ್ಲಿ 378 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೌಮ್ಯ ಲಕ್ಷಣದ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಮ್ಸ್ ಬಳಿಯಿರುವ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ 500 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತೆರೆಯಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಶನಿವಾರ ಬೆಳಗ್ಗೆ ಜಿಲ್ಲೆಗೆ 200 ವಯಲ್ ರೆಮ್ ಡಿಸಿವಿರ್ ಇಂಜೆಕ್ಷನ್ ಬಂದಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಅಗತ್ಯಕ್ಕನುಗುಣವಾಗಿ ಹೆಚ್ಚಿನ ಇಂಜೆಕ್ಷನ್ ಒದಗಿಸಲು ಸರ್ಕಾರ ಭರವಸೆ ನೀಡಿದೆ ಎಂದರು.

ಸಿಟಿ ಸ್ಕ್ಯಾನ್ ದರ ನಿಯಮ ಉಲ್ಲಂಘಿಸಿದರೆ ಕ್ರಮ: ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನ್ ಸೇವೆಗೆ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿದೆ. ಸ್ಕ್ಯಾನ್ ಗೆ ಬರುವ ರೋಗಿಗಳಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ಅವರು ಎಚ್ಚರಿಕೆ ನೀಡಿದರು. ಹೆಚ್ಚಿನ ದರ ವಿಧಿಸುವ ಆಸ್ಪತ್ರೆಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ‌ ನೀಡಲಾಗಿದೆ ಎಂದರು.

ಇನ್ನು, ಆಸ್ಪತ್ರೆಯಲ್ಲಿರುವ ಕೋವಿಡ್ ರೋಗಿಗಳಿಗೆ ಅವರ ಸಂಬಂಧಿಕರು ಅಥವಾ ಕುಟುಂಬದವರು ಮನೆಯಿಂದ ಮಾಡಿದ ಆಹಾರವನ್ನು ತಲುಪಿಸಲು ಆಸ್ಪತ್ರೆಯಲ್ಲಿ ಒಂದು ಸಮಯ ನಿಗದಿ ಮಾಡಲಾಗುವುದು. ಈ ಕುರಿತು ಚರ್ಚೆ ನಡೆಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಡಾ.ಉಮೇಶ್ ಜಾಧವ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ.ಪಾಟೀಲ್ ರೇವೂರ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ.ಪಾಟೀಲ, ಶಶೀಲ್ ಜಿ. ನಮೋಶಿ, ಕರ್ನಾಟಕ‌ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯ ಶಿವರಾಜ ಪಾಟೀಲ ರದ್ದೆವಾಡಗಿ, ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next