ಹೈದರಾಬಾದ್/ತೆಲಂಗಾಣ:ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ತನ್ನ ಮೇಲೆ ಸುಮಾರು 139ಕ್ಕೂ ಅಧಿಕ ಮಂದಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ 25 ವರ್ಷದ ಮಹಿಳೆಯೊಬ್ಬಳು ದೂರು ನೀಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಈಕೆ ಮದುವೆಯಾದ ಒಂದು ವರ್ಷದೊಳಗೆ 2010ರಲ್ಲಿ ವಿವಾಹ ವಿಚ್ಛೇದನ ನಡೆದಿತ್ತು. ಆ ನಂತರ ಆಕೆಯ ಮಾಜಿ ಗಂಡನ ಕುಟುಂಬದ ಸದಸ್ಯರು ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಪೊಲೀಸರು ಪಿಟಿಐಗೆ ತಿಳಿಸಿರುವುದಾಗಿ ವರದಿ ಮಾಡಿದೆ.
ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ಹಾಗೂ ಎಸ್ ಸಿ/ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಸುಮಾರು 42 ಪುಟಗಳಷ್ಟು ಎಫ್ ಐಆರ್ ಬರೆಯಲಾಗಿದೆ. ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸತ್ಯಾಸತ್ಯತೆ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ತೆಲಂಗಾಣದ ಪಂಜಾಗುಟ್ಟಾ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ದೂರಿನಲ್ಲಿ ತಿಳಿಸಿರುವ ಪ್ರಕಾರ, 2009ರ ಜೂನ್ ನಲ್ಲಿ
(14 ಅಪ್ರಾಪ್ತ ವಯಸ್ಸು )ಮದುವೆಯಾದ ಮೂರು ತಿಂಗಳ ನಂತರ ಆಕೆಯ ಸಂಬಂಧಿಗಳು ದೈಹಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯ ನಡೆಸತೊಡಗಿದ್ದರು. ಇದು ಸುಮಾರು ಒಂಬತ್ತು ತಿಂಗಳವರೆಗೆ ನಡೆದಿತ್ತು. ಬಳಿಕ 2010ರ ಡಿಸೆಂಬರ್ ನಲ್ಲಿ ವಿವಾಹ ವಿಚ್ಛೇದನ ಪಡೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
ವಿವಾಹ ವಿಚ್ಛೇದನ ಪಡೆದ ನಂತರ ಮಹಿಳೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮುಂದಾಗಿದ್ದಳು. ಆದರೆ ಅಲ್ಲಿಯೂ ಆಕೆಯನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಹೀಗೆ ಕೆಲವು ವರ್ಷಗಳ ಕಾಲ ಹಲವಾರು ಮಂದಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿದ್ದಾಳೆ.
ಮಹಿಳೆಯ ದೂರಿನಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಸ್ಥಳಗಳಲ್ಲಿ ಸುಮಾರು 139ಕ್ಕೂ ಅಧಿಕ ಮಂದಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿಸಿದ್ದಾಳೆ. ದೂರು ನೀಡಿದರೆ ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಒಡ್ಡಿದ್ದರಿಂದ ಹೆದರಿ ಈವರೆಗೆ ದೂರು ನೀಡಲು ವಿಳಂಬವಾಗಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ವರದಿ ಹೇಳಿದೆ.