Advertisement

ನೇಕಾರರ ಪ್ರತಿ ಮಗ್ಗಕ್ಕೆ 25 ಸಾವಿರ ಪರಿಹಾರ: ಬಿಎಸ್‌ವೈ

11:31 PM Oct 04, 2019 | Lakshmi GovindaRaju |

ಬಾಗಲಕೋಟೆ: ಪ್ರವಾಹದ ವೇಳೆ ಹಾನಿಗೊಳಗಾದ ನೇಕಾರರ ಪ್ರತಿಯೊಂದು ಮಗ್ಗಗಳಿಗೂ ತಲಾ 25 ಸಾವಿರ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಣೆ ಮಾಡಿದರು. ಇಲ್ಲಿನ ಜಿಪಂ ಸಭಾ ಭವನದಲ್ಲಿ ಪ್ರವಾಹ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹ ಬಂದಾಗ ನೇಕಾರರು ತೀವ್ರ ಹಾನಿ ಅನುಭವಿಸಿದ್ದಾರೆ.

Advertisement

ಮಗ್ಗಗಳು ನೀರಿನಲ್ಲಿ ಮುಳುಗಿ ಹಾನಿಯಾಗಿವೆ. ಆದರೆ, ಎನ್‌ಡಿಆರ್‌ಎಫ್‌-ಎಸ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ನೇಕಾರರ ಮಗ್ಗಳಿಗೆ ಪರಿಹಾರ ಕೊಡಲು ಅವಕಾಶವಿಲ್ಲ. ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ನೇಕಾರರ ಮಗ್ಗಗಳಿಗೆ 25 ಸಾವಿರ ಪರಿಹಾರ ನೀಡಲಿದೆ. ಶನಿವಾರದಿಂದ ಎಲ್ಲ ಜಿಲ್ಲೆಗಳಲ್ಲಿ ನೇಕಾರರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವ್ಯಾಪಾರಸ್ಥರಿಗೂ 10 ಸಾವಿರ: ಪ್ರವಾಹದ ವೇಳೆ ಗ್ರಾಮದ ಮುಖ್ಯ ರಸ್ತೆಗಳ ಪಕ್ಕ ಇರುವ ಕಿರಾಣಿ, ಬಟ್ಟೆ, ಹೋಟೆಲ್‌ ಮುಂತಾದ ಅಂಗಡಿಗಳ ಸಾಮಗ್ರಿ ಹಾಳಾಗಿವೆ. ಹೀಗಾಗಿ ಅಂತಹ ಎಲ್ಲ ಅಂಗಡಿಗಳ ವ್ಯಾಪಾರಸ್ಥರಿಗೆ, ಸಂತ್ರಸ್ತರಿಗೆ ನೀಡಿದ ತಾತ್ಕಾಲಿಕ ಪರಿಹಾರದ ಮಾದರಿಯಲ್ಲೇ ತಲಾ 10 ಸಾವಿರ ನೀಡಲು ಸೂಚನೆ ನೀಡಲಾಗಿದೆ ಎಂದರು.

ಕೇಂದ್ರದ ನಿರ್ಧಾರ ನೋಡಿ ತೀರ್ಮಾನ: ಪ್ರವಾಹದಿಂದ ಕಬ್ಬು, ಹೆಸರು, ಬಾಳೆ, ದ್ರಾಕ್ಷಿ, ತೊಗರಿ ಸೇರಿ ಕೃಷಿ, ತೋಟಗಾರಿಕೆ ಬೆಳೆಗಳು ಅಪಾರ ಹಾನಿಯಾಗಿವೆ. ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ಹೆಕ್ಟೇರ್‌ಗೆ 13 ಸಾವಿರ ಪರಿಹಾರ ಬರುತ್ತದೆ. ಇದು ಬಹಳ ಕಡಿಮೆ ಯಾಗಲಿದ್ದು, ರೈತರ ನೆರವಿಗೆ ಬರಲ್ಲ. ಪ್ರಧಾನಿ ಮೋದಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರ ನೋಡಿಕೊಂಡು, ಬೆಳೆ ಹಾನಿಯಾದ ರೈತರಿಗೆ ಎಷ್ಟು ಪರಿಹಾರ ಕೊಡಬೇಕು ಎಂಬುದರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಖಜಾನೆ ಖಾಲಿ ಆಗಿಲ್ಲ: ಯಡಿಯೂರಪ್ಪ
ಬಾಗಲಕೋಟೆ: “ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ನಾನು ಹೇಳಿಲ್ಲ. ಖಜಾನೆ ಖಾಲಿಯಾಗಿದ್ದರೆ ಪ್ರವಾಹ ಸಂತ್ರಸ್ತರಿಗಾಗಿ 3,500 ಕೋಟಿ ರೂ.ಗಳನ್ನು ಹೇಗೆ ಕೊಡುತ್ತಿದ್ದೇವು. ಈ ಕುರಿತು ಮೂರು ದಿನಗಳ ಬಳಿಕ ಆರಂಭಗೊಳ್ಳಲಿರುವ ವಿಧಾನಸಭೆ ಅಧಿವೇಶನದಲ್ಲೇ ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿಯವರು ಬೇರೆ, ಬೇರೆ ಕಾಮಗಾರಿಗೆ ಅನುದಾನ ಕೇಳುತ್ತಿದ್ದರು.

Advertisement

ಆಗ ಖಜಾನೆಯಲ್ಲಿ ಹಣವೆಲ್ಲಿದೆ, ಮೊದಲು ಪ್ರವಾಹಕ್ಕೆ ಆದ್ಯತೆ ಕೊಡೋಣ. ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸೋಣ ಎಂದು ಹೇಳಿದ್ದೇನೆ. ಅದನ್ನೇ ವಿರೋಧ ಪಕ್ಷಗಳ ಕೆಲವರು ಸುಳ್ಳು ಸುದ್ದಿ ಹಬ್ಬಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು. ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಕೆಲವರು ಟೀಕೆ ಮಾಡುತ್ತಿದ್ದಾರೆ. ಮೂರು ದಿನಗಳ ಬಳಿಕ ಅಧಿವೇಶನ ಆರಂಭಗೊಳ್ಳಲಿದೆ. ಆಗ ಯಾರ ಅವಧಿಯಲ್ಲಿ ಖಜಾನೆಯ ಸ್ಥಿತಿಗತಿ ಹೇಗಿತ್ತು. ಸದ್ಯ ಖಜಾನೆ ಸ್ಥಿತಿಗತಿ ಏನು ಎಂಬುದನ್ನು ಬಿಚ್ಚಿಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next