ಚಿತ್ತಾಪುರ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೈತರು ಬೆಳೆದ ವಾಣಿಜ್ಯ ಬೆಳೆಗಳು ಸಂಪೂರ್ಣ ಜಲಾವೃತವಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಆದ್ದರಿಂದ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಮುಖಂಡರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಸಾಬಣ್ಣ ಗುಡುಬಾ ಮಾತನಾಡಿ, ತಾಲೂಕಿನ ಇಂಗಳಗಿ, ಕುಂದನೂರ, ಇಟಗಾ, ನಾಲವಾರ, ತರಕಸಪೇಟ್ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ರೈತರು ದುಬಾರಿ ವೆಚ್ಚ ಮಾಡಿ ತೊಗರಿ, ಹತ್ತಿ, ಹೆಸರು, ಎಳ್ಳು ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಲಕ್ಷಾಂತರ ರೂ. ಬೆಲೆ ಹೊಂದಿದ್ದ ವಾಣಿಜ್ಯ ಬೆಳೆಗಳು ಜಲಾವೃತಗೊಂಡು ಸಂಪೂರ್ಣ ಸರ್ವನಾಶವಾಗಿವೆ. ಪರಿಣಾಮ ರೈತರು ಕಂಗಾಲಾಗಿದ್ದಾರೆ. ದುಬಾರಿ ರಸಗೊಬ್ಬರ, ಬೀಜ ಖರೀದಿಸಿ ಜಮೀನಿನಲ್ಲಿ ಈಗಾಗಲೇ ಎರಡು ಬಾರಿ ಬಿತ್ತನೆ ಮಾಡಿದ ಪೈರು ಹಾಳಾಗಿದೆ. ಈಗ ಮೂರನೇ ಬಾರಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಉಂಟಾಗಿದೆ. ಮಾರುಕಟ್ಟೆಯಲ್ಲಿ ಬೀಜಗಳು ಸಿಗುತ್ತಿಲ್ಲ. ಕೆಲವು ವ್ಯಾಪಾರಸ್ಥರು ದುಪ್ಪಟ್ಟು ಬೆಲೆಗೆ ಬೀಜ, ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಮಧ್ಯೆ ಪ್ರವೇಶಿಸಿ ಆಯಾ ಗ್ರಾಮಗಳ ಪ್ರತ್ಯೇಕ ಸಭೆ ನಡೆಸಿ, ಎರಡು ಬಾರಿ ಬಿತ್ತನೆ ಮಾಡಿ ಹಾನಿಯಾದ ಬೆಳೆಗಳಿಗೆ ಪ್ರತಿ ಎಕರೆಗೆ 25ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಬೆಳೆಗಳಿಗೆ ವಿಮೆ ಮಾಡಿಸಲಾಗಿದೆ. ಆದರೆ ಪ್ರತಿವರ್ಷ ವಿಮೆ ಹಣ ರೈತರ ಖಾತೆಗೆ ತಲುಪುತಿಲ್ಲ. ಆದ್ದರಿಂದ ನೇರವಾಗಿ ರೈತರ ಖಾತೆಗೆ ವಿಮೆ ಹಣ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು. ಇಂಗಳಗಿ ಗ್ರಾಮದ ದುರ್ಗಮ್ಮ ತಮ್ಮಣ್ಣ ಮನೆ ಸಂಪೂರ್ಣ ಬಿದ್ದಿದೆ. ಅವರಿಗೆ ಪರಿಹಾರ ನೀಡುವ ಮೂಲಕ ಆಶ್ರಯ ಯೋಜನೆಯಡಿ ಮನೆ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ಬಸವರಾಜ ಸ್ಥಾವರಮಠ, ಮಶಾಖ ಪಟೇಲ್, ನಾಗರಾಜ ಅಳ್ಳೋಳ್ಳಿ, ಭೀಮರಾಯ ಗೌಡ ಬಿರಾದಾರ, ಕಲ್ಲಪ್ಪ ನಾಟೀಕಾರ, ಚಂದ್ರಕಾಂತ ಬಳವಡಗಿ, ನಿಂಗಪ್ಪ ಪೂಜಾರಿ, ರಶೀದ್ ಪಟೇಲ್, ಬಾಬುರಾವ ತಳವಾರ, ಗಿಡ್ಡಮ್ಮ ಪವಾರ್, ವಿಜಯಲತಾ ಸಂಕಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.