ಹೊಸದಿಲ್ಲಿ: ವಿವಿಧ ವಿಷಯಗಳಲ್ಲಿ ಪರಿಣತರಾಗಿರುವ ಖಾಸಗಿ ವಲಯದ 25 ತಜ್ಞರು ಶೀಘ್ರದಲ್ಲೇ ಕೇಂದ್ರ ಸರಕಾರದ ಪ್ರಮುಖ ಹುದ್ದೆಗಳಿಗೆ ಸೇರ್ಪಡೆಯಾಗಲಿದ್ದಾರೆ.
ಕೇಂದ್ರ ವಿವಿಧ ಇಲಾಖೆಗಳಲ್ಲಿ ಮೂವರು ಜಂಟಿ ಕಾರ್ಯದರ್ಶಿಗಳು, 22 ನಿರ್ದೇಶಕರು ಅಥವಾ ಉಪ ಕಾರ್ಯದರ್ಶಿಗಳ ನೇಮಕಕ್ಕೆ ಪ್ರಧಾನಿ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿ (ಎಸಿಸಿ)ಯು ಅನುಮೋದನೆ ನೀಡಿದೆ.
ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಪ್ರತಿಭೆಗಳನ್ನು ಸರಕಾರದ ಭಾಗವಾಗಿ ಸಲು ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ಈ ನೇಮಕ ನಡೆಯಲಿದೆ.
ಸಾಮಾನ್ಯವಾಗಿ ಐಎಎಸ್, ಐಪಿಎಸ್, ಐಎಫ್ಒಎಸ್ (ಭಾರತೀಯ ಅರಣ್ಯ ಸೇವೆ) ಅಧಿಕಾರಿಗಳು ಹಾಗೂ ಇತರ “ಎ’ ಗ್ರೂಪ್ ಅಧಿಕಾರಿಗಳು ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿ ಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳ ಹುದ್ದೆಗಳನ್ನು ಅಲಂಕರಿಸಲಿದ್ದಾರೆ.
2018ರ ಜೂನ್‌ನಲ್ಲಿ ಮೊದಲ ಬಾರಿಗೆ ಸಿಬಂದಿ ತರಬೇತಿ ಸಚಿವಾಲಯವು 10 ಜಂಟಿ ಕಾರ್ಯದರ್ಶಿಗಳ ಹುದ್ದೆಗಳಿಗೆ ಒಪ್ಪಂದದ ಆಧಾರದಲ್ಲಿ ನೇರ ನೇಮಕಕ್ಕೆ ತಜ್ಞರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಕೇಂದ್ರ ಲೋಕಸೇವಾ ಆಯೋಗ ಆಯೋಗವು (ಯುಪಿಎಸ್‌ಸಿ) ಈ ಹುದ್ದೆಗಳಿಗೆ ಈ ನೇಮಕ ನಡೆಸಿತ್ತು. 2021ರ ಅಕ್ಟೋಬರ್‌ನಲ್ಲಿ ಪುನಃ ಮೂವರು ಜಂಟಿ ಕಾರ್ಯದರ್ಶಿಗಳು, 19 ನಿರ್ದೇಶಕರು ಮತ್ತು 9 ಉಪ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 31 ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಯುಪಿಎಸ್‌ಸಿ ನಡೆಸಿತ್ತು.
ಪ್ರಸ್ತುತ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಸಗಿ ವಲಯದ 33 ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 8 ಜಂಟಿ ಕಾರ್ಯದರ್ಶಿಗಳು, 16 ನಿರ್ದೇಶಕರು ಮತ್ತು 9 ಉಪ ಕಾರ್ಯದರ್ಶಿಗಳು ಸೇರಿದ್ದಾರೆ. ಈಗ ವಿವಿಧ ಹುದ್ದೆಗಳಿಗೆ ಹೊಸದಾಗಿ ಖಾಸಗಿ ವಲಯದ 25 ತಜ್ಞರ ನೇಮಕಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ.