ಹೊಸದಿಲ್ಲಿ: ಉತ್ತರ ಪ್ರದೇಶ ಸರಕಾರ ಅಲಹಾಬಾದ್‌ಗೆ ಪ್ರಯಾಗ್‌ರಾಜ್, ಫೈಝಾಬಾದ್‌ಗೆ ಅಯೋಧ್ಯೆ ಎಂದು ನಾಮಕರಣ ಮಾಡುವುದರ ಜತೆಗೆ ಇನ್ನಷ್ಟು ಸ್ಥಳಗಳ ಹೆಸರು ಬದಲಾವಣೆಗೆ ಸೈ ಎಂದಿದೆ. ಕಳೆದೊಂದು ವರ್ಷದ ಅವಧಿಯಲ್ಲಿ ಕೇಂದ್ರ ಗೃಹ ಇಲಾಖೆ ದೇಶದ 25 ಪಟ್ಟಣ ಮತ್ತು ಗ್ರಾಮಗಳ ಹೆಸರನ್ನು ಬದಲು ಮಾಡಿ ರಾಜ್ಯಗಳು ಸಲ್ಲಿಸಿದ್ದ ಕೋರಿಕೆಗೆ ಅನುಮೋದನೆ ನೀಡಿದೆ. ಇದೇ ವೇಳೆ ಪಶ್ಚಿಮ ಬಂಗಾಲವನ್ನು ‘ಬಾಂಗ್ಲಾ’ ಎಂದು ಕರೆಯಲು ಅನುಮತಿ ನೀಡಬೇಕೆಂದು ಅಲ್ಲಿನ ಸರಕಾರ ಸಲ್ಲಿಸಿರುವ ಮನವಿ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ.
ಗುಜರಾತ್ ಮುಖ್ಯಮಂತ್ರಿ ವಿಜಯ ರುಪಾಣಿ ಅಹ್ಮದಾಬಾದ್ ಬದಲಾಗಿ ‘ಕರ್ಣಾವತಿ’ ಎಂದು ನಾಮಕರಣ ಮಾಡುವ ಚಿಂತನೆ ಇದೆ ಎಂದು ಘೋಷಣೆ ಮಾಡಿದ್ದಾರೆ. ಉ.ಪ್ರ. ಸರಕಾರ 2 ನಗರಗಳ ಹೆಸರು ಬದಲಾವಣೆಯ ಘೋಷಣೆ ಮಾಡಿದ್ದರೂ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಮನವಿಯನ್ನು ಇನ್ನಷ್ಟೇ ಸಲ್ಲಿಸಬೇಕಾಗಿದೆ.
ಅನುಮೋದನೆಗೊಂಡ ಪಟ್ಟಣ – ಗ್ರಾಮಗಳ ಪೈಕಿ ಪ್ರಮುಖವೆಂದರೆ ಆಂಧ್ರಪ್ರದೇಶದ ರಾಜಮುಂಡ್ರಿಯನ್ನು ‘ರಾಜಾ ಮಹೇಂದ್ರವರ್ಮಮ್’, ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಸುವ ಒಡಿಶಾದ ಔಟರ್ ವ್ಹೀಲರ್ ಅನ್ನು ‘ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪ’, ಕೇರಳದ ಮಲಪ್ಪುರ ಜಿಲ್ಲೆಯ ಅರೀಕೋಡೆಯನ್ನು ‘ಅರಿಕ್ಕೋಡ್’ ಎಂದು ಬದಲಿಸಲು ಅನುಮೋದನೆ ನೀಡಿದೆ. ಹರಿಯಾಣದ ಪಿಂಡಾರಿ ನಗರವನ್ನು ‘ಪಾಂಡು-ಪಿಂಡಾರ’ ಎಂದೂ ನಾಗಾಲ್ಯಾಂಡಿನ ಸಾಂಪುರ್ ನಗರವನ್ನು ‘ಸಾಮ್‌ಪುರಿ’ ಎಂದೂ ಬದಲಾಯಿಸಲಾಗಿದೆ.
ಅದೇ ರೀತಿ ಕೆಲ ಪ್ರಸ್ತಾವನೆಗಳೂ ತಿರಸ್ಕೃತಗೊಂಡಿವೆ. ಹಾಲಿ ಇರುವ ನಿಯಮಗಳನ್ನು ಆಧರಿಸಿ ಮತ್ತು ಸಂಬಂಧಿತರ ಜತೆಗೆ ಚರ್ಚಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಹೇಳಿದ್ದಾರೆ. 2011ರಲ್ಲಿ ಒರಿಸ್ಸಾವನ್ನು ‘ಒಡಿಶಾ’ ಎಂದು ಮರು ನಾಮಕರಣಗೊಳಿಸಲಾಗಿತ್ತು. 2014ರಲ್ಲಿ ‘ಬ್ಯಾಂಗಲೋರ್’ ಎಂಬ ಹೆಸರನ್ನು ಬದಲಿಸಿ ಬೆಂಗಳೂರು ಎಂಬ ಪ್ರಸ್ತಾವ ಸೇರಿ ಕರ್ನಾಟಕದ 11 ನಗರಗಳ ಹೆಸರುಗಳಿಗೆ ಅನುಮೋದನೆ ನೀಡಿತ್ತು.
ರಾಜಕೀಯ ಲೆಕ್ಕಾಚಾರ: ಚರ್ಚೆ
ಅಷ್ಟಕ್ಕೂ ಹೆಸರು ಬದಲಾವಣೆಯ ಹಿಂದೆ ರಾಜಕೀಯ ಲೆಕ್ಕಾಚಾರ ಹೊಂದಿದೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದಕ್ಕೆ ಅನುಮೋದನೆ ನೀಡುವ ಮೂಲಕ ಇದರ ಲಾಭ ಪಡೆದುಕೊಳ್ಳಲು ಹೊರಟಿದೆ ಎಂದೂ ಹೇಳಲಾಗುತ್ತಿದೆ. ಇವೆಲ್ಲದರ ನಡುವೆ ಇತ್ತೀಚೆಗೆ ಆರ್‌ಎಸ್‌ಎಸ್ ನಾಯಕರು ನಡೆಸಿದ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಇಂಥದ್ದೊಂದು ಸಲಹೆ ನೀಡಿದ್ದರು ಎಂದೂ ಹೇಳಲಾಗುತ್ತಿದೆ. ಪಶ್ಚಿಮ ಬಂಗಾಲವನ್ನು ಬಾಂಗ್ಲಾ ಎಂದು ಬದಲಿಸುವುದರ ಹಿಂದೆಯೂ ರಾಜಕೀಯ ಲೆಕ್ಕಾಚಾರ ಇದೆ ಎನ್ನಲಾಗಿದೆ.
– ದೇಶದ ಪ್ರಮುಖ ನಗರಗಳ ಹೆಸರು ಬದಲು ಕ್ರಮ ನಡುವೆಯೇ ಕೇಂದ್ರದ ಕ್ರಮ
– ಹೆಸರು ಬದಲಿನ ಜತೆಗೆ ಕೆಲವೊಂದು ಪ್ರಸ್ತಾವಗಳೂ ತಿರಸ್ಕೃತ
– 2011ರಲ್ಲಿ ಬೆಂಗಳೂರು ಸೇರಿ ಕರ್ನಾಟಕದ 11 ನಗರಗಳ ಹೆಸರು ಬದಲಿಗೆ ನಿರ್ಧಾರ
– ಹೊಸ ಪಟ್ಟಿಯಲ್ಲಿ ಕರ್ನಾಟಕದ ನಗರ- ಪಟ್ಟಣಗಳಿಲ್ಲ