ಬೆಳಗಾವಿ: ದೇಶಾದ್ಯಂತ ಲಾಕ್ ಡೌನ್ ಇದ್ದರೂ ಜನರು ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯುತ್ತಿದ್ದಾರೆ. ಅಂತ್ಯ ಸಂಸ್ಕಾರ ಮುಗಿಸಿಕೊಂಡು ಒಂದೇ ಅಂಬ್ಯುಲೆನ್ಸ್ ನಲ್ಲಿ ತೆರಳುತ್ತಿದ್ದ 25 ಜನರು ಶನಿವಾರ ರಾತ್ರಿ ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಅಂತ್ಯಸಂಸ್ಕಾರ ಮುಗಿಸಿಕೊಂಡು ಅಂಬ್ಯುಲೆನ್ಸ್ ವಾಹನದಲ್ಲಿ ಬರುತ್ತಿದ್ದ ಸುಮಾರು 25 ಜನರನ್ನು ತಡೆ ಹಿಡಿದ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಮಾರ್ಕೆಟ್ ಎಸಿಪಿ ಎನ್.ವಿ. ಭರಮನಿ ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಅಂಬ್ಯುಲೆನ್ಸ್ ಹೋಗುತ್ತಿರುವುದನ್ನು ಗಮನಿಸಿದಾಗ ಸಿಕ್ಕಿ ಬಿದ್ದಿದ್ದಾರೆ.
ಜಿಲ್ಲಾಸ್ಪತ್ರೆ ರಸ್ತೆಯಲ್ಲಿರುವ ಸ್ಮಶಾನಕ್ಕೆ ಹೋಗಿ ಈ ಅಂಬ್ಯುಲೆನ್ಸ್ ಬರುತ್ತಿತ್ತು. ಕೂಡಲೇ ನಿಲ್ಲಿಸಿದಾಗ ಅದರಲ್ಲಿ 25 ಜನರು ಇದ್ದರು. ಎಲ್ಲರನ್ನೂ ತರಾಟೆಗೆ ತೆಗೆದುಕೊಂಡ ಎಸಿಪಿ ಭರಮನಿ, ಲಾಕ್‌ಡೌನ್ ಇದೆ ಎಂದು ಗೊತ್ತಿದ್ದರ ಹೀಗೆ ತುಂಬಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹೋಗುತ್ತಿದ್ದೀರಲ್ಲ ನಿಮಗೆ ಗೊತ್ತಾಗುವುದಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸೇರಿ 10ಕ್ಕೂ ಹೆಚ್ಚು ಜನ ಸೇರಬಾರದು ಎಂಬ ನಿಯಮ ಇದ್ದರೂ ತಾವೂ 25 ಜನ ಹೇಗೆ ಹೋಗಿದ್ದೀರಿ. ಇದರಿಂದ ಅನೇಕರಿಗೆ ಕೊರೊನಾ ಸೋಂಕು ತಗಲುತ್ತದೆ ಎಂಬ ಪರಿಜ್ಞಾನ ನಿಮಗಿಲ್ಲವೇ. ಪೊಲೀಸರು ತಿಂಗಳಿಂದ ಇದನ್ನೇ ಹೇಳುತ್ತಿದ್ದರೂ ನೀವು ಕೇಳುವ ಸ್ಥಿತಿಯಲ್ಲಿ ಇಲ್ಲ. ಸಾಮಾಜಿಕ ಅಂತರ ನಮಗಾಗಿ ಕಾಯ್ದುಕೊಳ್ಳುವುದಲ್ಲ, ನಿಮ್ಮ ಆರೋಗ್ಯಕ್ಕಾಗಿ ಕಾಪಾಡಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡರು. ನಂತರ ಅಂಬ್ಯುಲೆನ್ಸ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಎಸಿಪಿ ಚಂದ್ರಪ್ಪ, ಇನ್ಸಪೆಕ್ಟರ್‌ಗಳಾದ ಸಂಗಮೇಶ ಶಿವಯೋಗಿ, ಧೀರಜ ಶಿಂಧೆ ಇತರರು ಇದ್ದರು.