ನವಲಗುಂದ: ಪೊಲೀಸ್ ದೌರ್ಜನ್ಯಕ್ಕೆ ತಾಲೂಕಿನ ಮೂವರ ರೈತರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಕೂಡಲೇ 25ಲಕ್ಷ ರೂ. ಪರಿಹಾರ ನೀಡಬೇಕೆಂದು ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ ಹೆಬಸೂರ ಆಗ್ರಹಿಸಿದರು. ವಿವಿಧ ಬೇಡಿಕೆಗಾಗಿ ಕರ್ನಾಟಕ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಲ್ಲಿನ ರೈತ ಭವನದಲ್ಲಿ ಮಾತನಾಡಿದರು.
ತಾಲೂಕಿನಾದ್ಯಂತ ದು ಸಾವಿರಕ್ಕೂ ಹೆಚ್ಚು ಜನರು ಪೊಲೀಸರ ಲಾಠಿ ಏಟು ತಿಂದಿದ್ದಾರೆ. ಆದರೆ ಸರಕಾರದಿಂದ ಕೇವಲ 150 ಜನರಿಗೆ ಪರಿಹಾರ ನೀಡಲಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಹಲ್ಲೆಗೊಳಗಾದ ರೈತರಿಗೆ ಪರಿಹಾರ ಬಂದಿಲ್ಲ. ಹೀಗಾಗಿ ಯಾವ ರೀತಿಯಲ್ಲಿ ಪರಿಹಾರ ನೀಡಲು ಸರಕಾರಕ್ಕೆ ವರದಿ ಸಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು.
ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯ ಸರಕಾರ ರೈತರ ಸಾಲಮನ್ನಾ ಮಾಡದೇ ಹೋದರೆ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ತಡಹಾಳದ ಸಿದ್ಧಾರೂಢಮಠದ ಶಿವಯೋಗಿ ಸ್ವಾಮೀಜಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ರೈತರ ಕುರಿತು ಕಿಂಚಿತ್ ಕಾಳಜಿ ಇಲ್ಲ.
ಉಭಯ ಸರಕಾರಗಳಿಗೆ ಕಣ್ಣು, ಕಿವಿ ಇಲ್ಲದಂತಾಗಿದೆ. ರೈತರು ಶಾಂತಿಯುತ ಹೋರಾಟ ನಡೆಸಿ ಯೋಜನೆ ಜಾರಿಗೊಳಿಸಲು ಶ್ರಮಿಸಬೇಕು ಎಂದರು. ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಮನವಿ ಸ್ವೀಕರಿಸಿ, ಈಗಾಗಲೇ ಮೃತಪಟ್ಟ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ತಹಶೀಲ್ದಾರ ನವೀನ ಹುಲ್ಲೂರ, ಡಿವೈಎಸ್ಪಿ ಪಿ.ಬಿ.ಚಂದ್ರಶೇಖರ, ದ್ಯಾಮಣ್ಣ ಜಂತ್ಲಿ, ಶಿವಾನಂದ ಬರದ್ವಾಡ, ಬಸಯ್ಯ ಮಠಪತಿ, ಶಿವಾನಂದ ಹೂಗಾರ, ಎಂ.ಕೆ. ವೈದ್ಯ, ಸೋಮಶೇಖರ ವೀರೇಶನವರ, ಎ.ಎಸ್. ಬರ್ಗೆ, ಸಿದ್ದಪ್ಪ ಜೆಟ್ಟಣ್ಣವರ, ಡಿ.ವಿ.ಕುರಹಟ್ಟಿ ಇದ್ದರು.