ಅದೊಂದು ಕಾಲವಿತ್ತು. ಸಿನಿಮಾ ನೂರು ದಿನ ಓಡಿದ ಸಂಭ್ರಮವನ್ನು ಇಡೀ ತಂಡ ಜೊತೆಯಾಗಿ ಆಚರಿಸುತ್ತಿತ್ತು. ವರ್ಷ ಉರುಳುತ್ತಾ, ಆ ಖುಷಿ 50 ದಿನಕ್ಕೆ ಸೀಮಿತವಾಯಿತು. ಆದರೆ, ಈಗ 25 ದಿನಕ್ಕೆ ಬಂದು ನಿಂತಿದೆ. ಸಿನಿಮಾವೊಂದು 10-15 ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿದರೇನೇ ಈಗ ದೊಡ್ಡ ಹಬ್ಬ. ಮನರಂಜನಾ ಕ್ಷೇತ್ರದ ಸದ್ಯದ ಪರಿಸ್ಥಿತಿಯಲ್ಲಿ 25ನೇ ದಿನಕ್ಕೆ ಖುಷಿಪಡೋದು ಅನಿವಾರ್ಯ ಕೂಡಾ. ಇದೇ ಕಾರಣದಿಂದ ಸಿನಿಮಾ ತಂಡಗಳು 25 ದಿನದ ಕಾರ್ಯಕ್ರಮ ಮಾಡಿ ಖುಷಿ ಪಡುತ್ತಿವೆ. ಇತ್ತೀಚೆಗೆ “ಫಾರ್ ರಿಜಿಸ್ಟ್ರೇಶನ್’ ಚಿತ್ರತಂಡ ಸಿನಿಮಾದ 25ದಿನದ ಸಂಭ್ರಮ ಆಯೋಜಿಸಿತ್ತು.
ಹೌದು, ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ನಟನೆಯ “ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಚಿತ್ರತಂಡ ಈ ಸಂಭ್ರಮಕ್ಕಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಸಿನಿಮಾ ಯಶಸ್ಸಿಗೆ ಕಾರಣರಾದ ಇಡೀ ಚಿತ್ರತಂಡ ಸ್ಮರಣಿಕೆ ನೀಡಿ ಗೌರವ ಸಲ್ಲಿಸಲಾಯಿತು
ಬಳಿಕ ಮಾತನಾಡಿದ ನಿರ್ಮಾಪಕ ನವೀನ್ ರಾವ್, ಪ್ರಾರಂಭದ ದಿನದಲ್ಲೇ ಬಹುತೇಕ ಕಡೆ ನಮ್ಮ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಪರಭಾಷಾ ಸಿನಿಮಾಗಳ ಅಬ್ಬರದ ನಡುವೆ ಫಾರ್ ರಿಜಿಸ್ಟ್ರೇಷನ್ ಸಿನಿಮಾ 25 ದಿನ ಪೂರೈಸಿದೆ. ನಮ್ಮ ಮೊದಲ ಸಿನಿಮಾಗೆ ಎಲ್ಲೆಡೆಯಿಂದ ಬೆಂಬಲ ಸಿಕ್ಕಿದೆ. ಚಿತ್ರ ಗೆದ್ದಿರುವುದು ಖುಷಿ ಕೊಟ್ಟಿದೆ ಎಂದರು.
ನಿರ್ದೇಶಕ ನವೀನ್ ದ್ವಾರಕನಾಥ್ ಮಾತನಾಡಿ, ನನ್ನ ಮೊದಲ ಕನಸಿಗೆ ನವೀನ್ ಜೊತೆಯಾದರು. ನಾವು ಏನೇ ಕಥೆ ಬರೆದರು. ಕಥೆಗೆ ರೂಪ ಕೊಡುವುದು ಪಾತ್ರಧಾರಿಗಳು. ಅದರಂತೆ ಇಡೀ ತಂಡ ನಮ್ಮ ಪಯಣಕ್ಕೆ ಜೊತೆಯಾಗಿ ನಿಂತಿದೆ. ನಮ್ಮ ಕನಸು ಇಂದು ನನಸಾಗಿದೆ. ಸಿನಿಮಾ ಮಾಡುವುದು ಮುಖ್ಯವಲ್ಲ. ರಿಲೀಸ್ ಮಾಡುವುದು ಎಷ್ಟು ಮುಖ್ಯ ಎನ್ನುವುದು ಅರ್ಥ ಆಗಿದೆ. ಜೂನ್ ನಲ್ಲಿ ಸಿನಿಮಾ ತೆಲುಗಿಗೆ ಡಬ್ ಆಗಲಿದೆ. 25 ದಿನ ಸೆಲೆಬ್ರೆಟ್ ಮಾಡುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಈಗ ಖುಷಿಯಾಗುತ್ತಿದೆ’ ಎಂದು ಸಂತಸ ಹಂಚಿಕೊಂಡರು.
ನಟ ಪೃಥ್ವಿ ಅಂಬರ್ ಮಾತನಾಡಿ, “ಸಿನಿಮಾ ಗೆದ್ದಿರುವುದು ತುಂಬಾ ಖುಷಿ ಇದೆ. ಇದೊಂದು ದೊಡ್ಡ ಜರ್ನಿ. ನಿರ್ದೇಶಕರು ನಿರ್ಮಾಪಕರು ಇಬ್ಬರು ಫ್ಯಾಷನೇಟೇಡ್. ಇಬ್ಬರು ಇದೇ ರೀತಿ ಮುಂದೆ ಸಾಗಲಿ. ನಿಮ್ಮ ಮುಂದಿನ ಸಿನಿಮಾ 100 ದಿನ ಆಚರಣೆ ಮಾಡುವಂತೆ ಆಗಲಿದೆ’ ಎಂದು ಹಾರೈಸಿದರು.
ಸಂಬಂಧ ಹಾಗೂ ಭಾವನಾತ್ಮಕ ಎಳೆಯನ್ನು ಒಳಗೊಂಡು ಫಾರ್ ರಿಜಿಸ್ಟ್ರೇಷನ್ ಸಿನಿಮಾಗೆ ನವೀನ್ ದ್ವಾರಕನಾಥ್ ಆ್ಯಕ್ಷನ್ ಕಟ್ ಹೇಳಿದ್ದರು. ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕು ಖರೀದಿ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗಲಿದೆ ಎನ್ನುವುದು ತಂಡದ ಮಾತು.
ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ತಾರಾಬಗಳಗದಲ್ಲಿದ್ದಾರೆ. ಚಿತ್ರದ ಚಿತ್ರಕಥೆ, ನಿರ್ದೇಶನ ನವೀನ್ ದ್ವಾರಕನಾಥ್ ಅವರದು.