ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರವಾಹ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಕೋಟಿ ರೂ. ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಡಿದರು. ಸೋಮವಾರ ರಾತ್ರಿ ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು 25 ಕೋಟಿ ರೂ. ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ, ರಾಜ್ಯದಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ದೊಡ್ಡ ಮೊತ್ತದಲ್ಲಿ ಹಾನಿಯಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಗ್ರಾಮೀಣಾಭಿವೃದ್ದಿ ಯೋಜನೆಯಲ್ಲಿರುವ ರೈತರು, ಸದಸ್ಯರನ್ನು ನಿತ್ಯ ಮಾತನಾಡಿಸುತ್ತಿರುವುದರಿಂದ ಮಳೆಯಿಂದ ಯಾವ ರೀತಿ ಭೀಕರ ಹಾನಿಯಾಗಿದೆ ಹಾಗೂ ಅವರ ನೋವು ಏನೆಂಬುದು ಅರಿವಿಗೆ ಬಂದಿದೆ. ಹೀಗಾಗಿ ನಮ್ಮಲ್ಲಿ ಇರುವ ಎಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ನೀಡಿದ್ದೇವೆ ಎಂದು ಹೇಳಿದರು.
ಸರ್ಕಾರದಲ್ಲಿ ಇರುವಷ್ಟು ಶಕ್ತಿ ನಮ್ಮಲ್ಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಐದು ಲಕ್ಷ ರೂ. ವೆಚ್ಚದಲ್ಲಿ ನಿರಾಶ್ರಿತರಿಗೆ ಮನೆ ಕಟ್ಟಿಕೊಡುವ ಬಗ್ಗೆ ಹೇಳಿದ್ದಾರೆ. ಈ ವ್ಯವಸ್ಥೆ ನಮ್ಮಲ್ಲಿ ಇಲ್ಲದೆ ಇರುವುದರಿಂದ ಸರ್ಕಾರದ ಮೂಲಕ ನಮ್ಮ ಈ ಸೇವಾಕಾರ್ಯ ಮಾಡಿಸುತ್ತಿದ್ದೇವೆ. 25 ಕೋಟಿ ರೂ. ಸದ್ವಿನಿಯೋಗ ಆಗಲಿದೆ ಎಂಬ ನಂಬಿಕೆ ಇದೆ. ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದದೊಂದಿಗೆ ಈ ದೇಣಿಗೆ ನೀಡುತ್ತಿದ್ದೇವೆ. ನಿರಾಶ್ರಿತರ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳ ಈ ಸೇವೆ ನಾಡಿನ ಮಠ, ಮಂದಿರ ಹಾಗೂ ಸ್ವಾಮೀಜಿಗಳಿಗೆ ಪ್ರೇರಣೆಯಾಗಲಿದೆ. ಧರ್ಮಾಧಿಕಾರಿಗಳು ಖುದ್ದಾಗಿ ಬಂದು ನೆರೆ ಸಂತ್ರಸ್ತರ ಪರಿಹಾರಕ್ಕೆ 25 ಕೋಟಿ ರೂ. ನೀಡಿ ನಮಗೆಲ್ಲರಿಗೂ ಆಶೀರ್ವಾದ ಮಾಡಿದ್ದಾರೆ ಎಂದರು. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಹೋದರ ಸುರೇಂದ್ರ ಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಇತರರಿದ್ದರು.