Advertisement

ಮೀನುಗಾರರಿಗೆ 25 ಕೋ.ರೂ. ಡೀಸೆಲ್‌ ಸಬ್ಸಿಡಿ ಬಾಕಿ ! ಸಂಕಷ್ಟದಲ್ಲಿ ಕರಾವಳಿಯ ಮೀನುಗಾರಿಕೆ

02:28 AM Feb 26, 2021 | Team Udayavani |

ಮಂಗಳೂರು: ಡೀಸೆಲ್‌ ದರ ಹೆಚ್ಚಳದಿಂದ ಈಗಾಗಲೇ ತತ್ತರಿಸಿರುವ ಕರಾವಳಿಯ ಮೀನುಗಾರರಿಗೆ ಕಳೆದ ನಾಲ್ಕು ತಿಂಗಳಿನಿಂದ ರಾಜ್ಯ ಸರಕಾರವು ಬರೋಬ್ಬರಿ 25 ಕೋ.ರೂ.ಗಳಿಗೂ ಅಧಿಕ ಮೊತ್ತದ ಡೀಸೆಲ್‌ ಸಬ್ಸಿಡಿ ಬಾಕಿ ಇರಿಸಿರುವ ಕಾರಣ ಮೀನುಗಾರಿಕಾ ವಲಯದಲ್ಲಿ ಬಹುದೊಡ್ಡ ಆತಂಕ ಎದುರಾಗಿದೆ.

Advertisement

ಒಂದು ಲೀಟರ್‌ ಡೀಸೆಲ್‌ ದರದಲ್ಲಿ ಒಳಗೊಂಡಿರುವ “ಮಾರಾಟ ಕರ’ವನ್ನು ಸರಕಾರ ಸಬ್ಸಿಡಿ ರೂಪದಲ್ಲಿ ಮೀನುಗಾರರಿಗೆ ನೀಡುತ್ತ ಬಂದಿದೆ. ಪ್ರತೀ ತಿಂಗಳಿಗೆ ಒಂದು ದೊಡ್ಡ ಬೋಟ್‌ಗೆ ಗರಿಷ್ಠ 9000 ಲೀಟರ್‌ ಡೀಸೆಲ್‌ವರೆಗೆ ಸಬ್ಸಿಡಿ ದೊರೆಯುತ್ತದೆ. ಮಂಗಳೂರಿನ ಸಾವಿರಾರು ಬೋಟ್‌ಗಳು ಈ ಸೌಲಭ್ಯ ಪಡೆಯುತ್ತಿವೆ. ಪ್ರತೀ ತಿಂಗಳು ಮೀನುಗಾರರ ಖಾತೆಗೆ ಈ ಮೊತ್ತ ಬಿಡುಗಡೆಯಾಗುತ್ತಿತ್ತು. ಅಕ್ಟೋಬರ್‌ವರೆಗೂ ಈ ಮೊತ್ತ ಸಮರ್ಪಕವಾಗಿ ಸರಕಾರ ಬಿಡುಗಡೆ ಮಾಡಿತ್ತು. ಆದರೆ, ನವೆಂಬರ್‌ನಿಂದ ಇಲ್ಲಿಯವರೆಗೆ ಮಾತ್ರ ಸಬ್ಸಿಡಿ ಬಿಡುಗಡೆಯಾಗಲೇ ಇಲ್ಲ.

ಮೀನುಗಾರಿಕಾ ಇಲಾಖೆಯ ಮಾಹಿತಿ ಪ್ರಕಾರ ಕರಾವಳಿ ಭಾಗಕ್ಕೆ ಡೀಸೆಲ್‌ ಸಬ್ಸಿಡಿ ಮೊತ್ತ ಸುಮಾರು 75 ಕೋ.ರೂ. ಬಿಡುಗಡೆ ಮಾಡಲು ಬಾಕಿ ಇದೆ. ಈ ಪೈಕಿ ಮಂಗಳೂರಿನ ಬೋಟ್‌ಗಳಿಗೆ ಸುಮಾರು 25 ಕೋ.ರೂ.ಗಳಿಗೂ ಅಧಿಕ ಮೊತ್ತ ಬಿಡುಗಡೆಗೆ ಬಾಕಿಯಿದೆ. ಈ ಹಿಂದೆ ಮಾರಾಟ ಕರ 1 ಲೀಟರ್‌ಗೆ 8 ರೂ. ಇದ್ದರೆ, ಈಗ 14 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಬಾಕಿ ಮೊತ್ತ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ. ಸದ್ಯ ಕೊರೊನಾ ಕಾರಣದಿಂದ ಸರಕಾರದಲ್ಲಿ ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲದ ಕಾರಣ ಮೊತ್ತ ಬಿಡುಗಡೆ ತಡವಾಗಿದೆ ಎನ್ನಲಾಗುತ್ತಿದೆ. ಆದರೆ, ಹಣ ಬಿಡುಗಡೆ ಮಾಡುವುದಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸಚಿವ ಎಸ್‌. ಅಂಗಾರ ತಿಳಿಸಿದ್ದಾರೆ.

ಮೀನುಗಾರ ಮುಖಂಡ ಮೋಹನ್‌ ಬೆಂಗ್ರೆ ಅವರ ಪ್ರಕಾರ “ಒಂದು ಬೋಟ್‌ ಒಮ್ಮೆ ಮೀನುಗಾರಿಕೆಗೆ ತೆರಳಲು ಆರರಿಂದ ಆರೂವರೆ ಸಾವಿರ ಲೀ. ಡೀಸೆಲ್‌ ಬೇಕು. ಕಳೆದ ವರ್ಷ ಈ ಹೊತ್ತಿಗೆ 68 ರೂ.ನಷ್ಟಿದ್ದ ಡೀಸೆಲ್‌ ದರ ಈಗ 80ರ ಗಡಿಯನ್ನೂ ದಾಟಿದೆ. ಇಂತಹ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಮಾಡುವುದು ಬಲು ಕಷ್ಟ ಎಂದವರು ಹೇಳಿದ್ದಾರೆ.

ಡೀಸೆಲ್‌ ದರ ಏರಿಕೆ; ಮೀನೂ ಇಲ್ಲ!
ಡೀಸೆಲ್‌ ಸಬ್ಸಿಡಿ ದೊರೆಯಲಿಲ್ಲ ಎಂಬ ಮೀನುಗಾರರ ದೂರಿನ ಮಧ್ಯೆಯೇ ಡೀಸೆಲ್‌ ದರ ಹೆಚ್ಚಳ ಕೂಡ ಮೀನುಗಾರಿಕೆಯನ್ನು ಬಹುದೊಡ್ಡ ಸಂಕಷ್ಟಕ್ಕೆ ತಳ್ಳಿದೆ. ಮೀನುಗಾರಿಕೆಗೆ ಒಮ್ಮೆ ತೆರಳುವ ಬೋಟ್‌ಗಳಿಗೆ ಸುಮಾರು 6500 ಲೀ. ಡೀಸೆಲ್‌ ಖರೀದಿಸುತ್ತಾರೆ. ಆದರೆ, ದಿನದಿಂದ ದಿನಕ್ಕೆ ಡೀಸೆಲ್‌ ದರ ಏರಿಕೆಯಾಗುತ್ತಿರುವ ಕಾರಣ ಬೋಟ್‌ಗಳ ನಿರ್ವಹಣೆಯೇ ಮೀನುಗಾರರಿಗೆ ತಲೆನೋವಾಗಿದೆ. ಜತೆಗೆ ಸಮುದ್ರದಲ್ಲಿ ಮೀನುಗಳ ಅಭಾವವೂ ಮೀನುಗಾರರಿಗೆ ಇದೀಗ ಹೊಸ ಆತಂಕ ಸೃಷ್ಟಿಸಿದೆ. ಬೋಟ್‌ಗಳು ತೆರಳಿದರೂ ಸಾಕಷ್ಟು ಮೀನು ಇಲ್ಲದೆ ನಷ್ಟವೇ ಅಧಿಕವಾಗಿದೆ. ಈ ಮಧ್ಯೆ ಕಾರ್ಮಿಕರ ವೇತನ ಹೆಚ್ಚಳ, ಬಲೆ, ರೋಪ್‌, ಕಬ್ಬಿಣದ ಸಾಮಗ್ರಿಗಳು, ಐಸ್‌ ದರ ಸೇರಿದಂತೆ ಇತರ ನಿರ್ವಹಣೆ ಖರ್ಚು ಕೂಡ ಹೆಚ್ಚಳವಾದ್ದರಿಂದ ಮೀನುಗಾರಿಕೆಗೆ ಸಂಕಷ್ಟ ಎದುರಾಗಿದೆ. ಇದೇ ಕಾರಣದಿಂದ ಶೇ.70ರಷ್ಟು ಆಳಸಮುದ್ರ ಮೀನುಗಾರಿಕೆ ಬೋಟ್‌ಗಳು ಈಗಾಗಲೇ ದಡ ಸೇರಿವೆ. ಕೆಲವೇ ಬೋಟ್‌ಗಳು ಮಾತ್ರ ಮೀನುಗಾರಿಕೆ ನಡೆಸುತ್ತಿವೆ.

Advertisement

ಶೀಘ್ರ ಬಿಡುಗಡೆ ನಿರೀಕ್ಷೆ
ಮೀನುಗಾರರಿಗೆ ನವೆಂಬರ್‌ ಬಳಿಕದಿಂದ ಡೀಸೆಲ್‌ ಸಬ್ಸಿಡಿ ಪಾವತಿ ಆಗಿಲ್ಲ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ಶೀಘ್ರ ಬಿಡುಗಡೆ ಮಾಡುವ ಬಗ್ಗೆ ಸರಕಾರದಿಂದ ಮಾಹಿತಿ ಬಂದಿದೆ.
-ಪಾರ್ಶ್ವನಾಥ್‌, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next