ಮಂಗಳೂರು: ಕೊಲೆ, ಕೊಲೆಯತ್ನ, ಜಾನುವಾರು ಕಳ್ಳತನ ಮುಂತಾದ 25 ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಸುಮಾರು 10 ಪ್ರಕರಣಗಳಲ್ಲಿ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದ ಬಂಟ್ವಾಳ ತಾಲೂಕು ಪುದು ಗ್ರಾಮದ ಅಮ್ಮೆಮಾರ್ ಇಮ್ರಾನ್ ಯಾನೆ ಕುಟ್ಟ (24)ನನ್ನು ಮಂಗಳೂರು ದಕ್ಷಿಣ ಎ.ಸಿ.ಪಿ. ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳದ ಸಿಬಂದಿ ರವಿವಾರ ಬಂಧಿಸಿದ್ದಾರೆ.
ಅರ್ಕುಳ ಗೇಟ್ ಬಳಿ ಆರೋಪಿಯನ್ನು ಬಂಧಿಸಿ, ದನ ಕಳವಿಗೆ ಉಪಯೋಗಿಸಿದ ಮಾರುತಿ ಆಮ್ನಿ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
25 ಜಾನುವಾರು ಕಳವು ಪ್ರಕರಣ: ಆರೋಪಿ ಇಮ್ರಾನ್ ಮೇಲೆ ಸುಮಾರು 25 ಜಾನುವಾರು ಕಳ್ಳತನ ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ದಾಖಲಾ ಗಿದೆೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ಬಜಪೆಯಲ್ಲಿ ಒಂದು, ಕೊಣಾಜೆ ಠಾಣಾ ಸರಹದ್ದಿನಲ್ಲಿ 3 ಪ್ರಕರಣಗಳು ದಾಖಲಾಗಿವೆ. ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು, ಬಂಟ್ವಾಳ ಠಾಣಾ ಸರಹದ್ದಿನಲ್ಲಿ 8 ಜಾನುವಾರು ಕಳ್ಳತನ ಪ್ರಕರಣಗಳು ದಾಖಲಾಗಿವೆ.
2017ರಲ್ಲಿ ಕೊಡಗು ಜಿಲ್ಲೆಯಲ್ಲಿ ಈತನ ವಿರುದ್ಧ 7 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿವೆ. ಶನಿವಾರ ಸಂತೆ ಠಾಣೆ ವ್ಯಾಪ್ತಿಯಲ್ಲಿ 3 ಪ್ರಕರಣಗಳಿದ್ದು, ಇದರಲ್ಲಿ ಜಾನುವಾರು ಕಳ್ಳತನದ ವೇಳೆ 2 ಕೊಲೆ ಯತ್ನ ಪ್ರಕರಣ ಮತ್ತು ಒಂದು ಜಾನುವಾರು ಕಳ್ಳತನ ಪ್ರಕರಣಗಳು ಸೇರಿವೆ. ಕುಶಾಲನಗರ ಗ್ರಾಮಾಂತರ ಠಾಣೆ ಯಲ್ಲಿ 3 ಮತ್ತು ಸೋಮವಾರ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಒಂದು ಜಾನುವಾರು ಕಳವು ಪ್ರಕರಣ ದಾಖಲಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಈತನ ವಿರುದ್ಧ ಲಾರಿ ಚಾಲಕನ ಕೊಲೆ ಮತ್ತು ವಾಹನ ಕಳವು ಪ್ರಕರಣವಿದೆ.
ಇವುಗಳ ಪೈಕಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ 3 ಮತ್ತು ಕೊಡಗು ಜಿಲ್ಲೆಯ 7 ಜಾನುವಾರು ಕಳವು ಪ್ರಕರಣಗಳಲ್ಲಿ ಇಮ್ರಾನ್ ತಲೆಮರೆಸಿಕೊಂಡಿದ್ದ. ಒಂದು ತಿಂಗಳ ಹಿಂದೆ ಈತನ ಸಹಚರನಾದ ನಿಝಾಮ…ನನ್ನು ರೌಡಿ ನಿಗ್ರಹ ದಳದ ತಂಡ ಬಂಧಿಸಿತ್ತು.
ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಆದೇಶ ದಂತೆ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ನಿರ್ದೇಶನದಂತೆ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಎಸಿಪಿ ರಾಮರಾವ್ ಮತ್ತು ಸಿಬಂದಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.