Advertisement

ಕಿಮ್ಸ್‌ ಸೇರಿ 8 ಕೇಂದ್ರಗಳಲ್ಲಿ 24×7 ಒಪಿಡಿ

06:01 PM Jan 21, 2022 | Team Udayavani |

ಧಾರವಾಡ: ಕೋವಿಡ್‌-19 ಪ್ರಕರಣ ಹೆಚ್ಚಳದಿಂದ ಕೋವಿಡ್‌ ಸೋಂಕಿತರ ಮತ್ತು ಶಂಕಿತರ ಪರೀಕ್ಷೆ, ಚಿಕಿತ್ಸೆಗೆ ಅನುಕೂಲವಾಗುವಂತೆ ದಿನದ 24 ಗಂಟೆಗಳ ಕಾಲವೂ ಸೇವೆ ನೀಡುವ ಹೊರರೋಗಿ ಚಿಕಿತ್ಸಾ (ಒಪಿಡಿ) ಕೌಂಟರ್‌ಗಳನ್ನು ಜಿಲ್ಲಾಸ್ಪತ್ರೆ, ಕಿಮ್ಸ್‌ ಸೇರಿದಂತೆ ಎಂಟು ಕೇಂದ್ರಗಳಲ್ಲಿ ಸೇವೆ ಆರಂಭಿಸಲಾಗಿದೆ ಎಂದು ಡಿಸಿ ನಿತೇಶ್‌ ಪಾಟೀಲ ಹೇಳಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್‌ ಲಕ್ಷಣ ಹೊಂದಿರುವ ಮತ್ತು ಲಕ್ಷಣ ಇಲ್ಲದಿರುವ ಸೋಂಕಿತರು ಕೋವಿಡ್‌ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವುದರಿಂದ ಸೋಂಕು ಇತರರಿಗೆ ಹರಡುವ, ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಅಂತಹವರ ಸಂಚಾರ ಕಡಿಮೆ ಮಾಡಲು, ಗಂಟಲು ದ್ರವ ಸಂಗ್ರಹ, ಫಿವರ್‌ ಕ್ಲಿನಿಕ್‌ ಹಾಗೂ ಒಪಿಡಿ ಘಟಕಗಳನ್ನು ವಿವಿಧ ಸ್ಥಳಗಳಲ್ಲಿ ವಿಕೇಂದ್ರೀಕರಿಸಿ ಆರಂಭಿಸಲಾಗಿದೆ. ಕೋವಿಡ್‌ ಸೋಂಕಿತರು, ಸೋಂಕಿನ ಲಕ್ಷಣ ಹೊಂದಿರುವ, ಲಕ್ಷಣ ಹೊಂದಿರದ ಸೋಂಕಿತರು ತಮಗೆ ಸಮೀಪದ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ, ಔಷಧ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

24 ಗಂಟೆ ತೆರೆದಿರುವ ಒಪಿಡಿ ಕೌಂಟರ್‌: ಕೋವಿಡ್‌ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ಹಾಗೂ ಔಷಧ ನೀಡಲು ದಿನದ 24 ಗಂಟೆ ಸೇವೆಗೆ ಲಭ್ಯವಿರುವ ಎಂಟು ಕೇಂದ್ರಗಳನ್ನು ಜಿಲ್ಲಾಡಳಿತ ಆರಂಭಿಸಿದೆ. ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್‌, ರೈಲ್ವೆ ಆಸ್ಪತ್ರೆ, ಚಿಟಗುಪ್ಪಿ, ಇಎಸ್‌ಐ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಅಂಜುಮನ್‌ ಹಾಸ್ಟೇಲ್‌, ಸಂಗೊಳ್ಳಿ ರಾಯಣ್ಣ ನಗರದ ಡಾ|ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನ, ಅಂಚಟಗೇರಿಯ ಮೊರಾರ್ಜಿ ದೇಸಾಯಿ ವಸತಿ ನಿಲಯಗಳಲ್ಲಿ ಸ್ಥಾಪಿಸಿರುವ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಹೊರ ರೋಗಿ ಚಿಕಿತ್ಸಾ (ಒಪಿಡಿ) ಕೌಂಟರ್‌ ತೆರೆಯಲಾಗಿದ್ದು, ಅಲ್ಲಿ ವೈದ್ಯರು ಆರೋಗ್ಯ ಸೇವೆ, ಔಷಧಗಳನ್ನು ನೀಡುತ್ತಿದ್ದಾರೆ.

24 ಗಂಟೆ ತೆರೆದಿರುವ ಫೀವರ್‌ ಕ್ಲಿನಿಕ್‌: ಸರಕಾರದ ಜಿಲ್ಲಾಸ್ಪತ್ರೆ, ಕಿಮ್ಸ್‌ ಆಸ್ಪತ್ರೆ, ಚಿಟಗುಪ್ಪಿ, ಇಎಸ್‌ಐ ಆಸ್ಪತ್ರೆ, ರೈಲ್ವೆ ಆಸ್ಪತ್ರೆ ಮತ್ತು ಎಸ್‌ಡಿಎಂ ಖಾಸಗಿ ಆಸ್ಪತ್ರೆಯಲ್ಲಿ 24 ಗಂಟೆ ಸೇವೆ ನೀಡುವ ಫೀವರ್‌ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಇಲ್ಲಿ ಸೋಂಕಿತರ ಸ್ವಾಬ್‌ ಸಂಗ್ರಹ ಮಾಡಿ ಪ್ರಾಥಮಿಕ ಚಿಕಿತ್ಸೆ, ಔಷಧ ನೀಡಲಾಗುತ್ತದೆ.

58 ಸ್ವಾಬ್‌ ಸಂಗ್ರಹ ಕೇಂದ್ರಗಳು: ಜಿಲ್ಲೆಯ 51 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕು ಆಸ್ಪತ್ರೆಗಳು ಹಾಗೂ ರೈಲ್ವೆ ಆಸ್ಪತ್ರೆಗಳಲ್ಲಿ ಮತ್ತು ಎಸ್‌ಡಿಎಂ ಖಾಸಗಿ ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ 10:00 ರಿಂದ ಸಂಜೆ 4:00 ಗಂಟೆವರೆಗೆ ಸ್ವಾಬ್‌ ಸಂಗ್ರಹ ಮಾಡಲಾಗುತ್ತದೆ. ಜಿಲ್ಲಾಸ್ಪತ್ರೆ, ಕಿಮ್ಸ್‌, ರೈಲ್ವೆ ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ಸ್ವಾಬ್‌ ಸಂಗ್ರಹ ವ್ಯವಸ್ಥೆ ಮಾಡಿದೆ. ಒಟ್ಟು 58 ಸ್ಥಳಗಳಲ್ಲಿ ಸ್ವಾಬ್‌ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಸ್ವಾಬ್‌ ಸಂಗ್ರಹಕ್ಕಾಗಿ 5 ಸಂಚಾರಿ ವಾಹನಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ತಾಲೂಕಿಗೆ ತಲಾ ಒಂದು ವಾಹನ ನೀಡಲಾಗಿದೆ.

Advertisement

ಕೋವಿಡ್‌ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಜತೆಗೆ ವಿವಿಧ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದ್ದು, ಸೌಲಭ್ಯಗಳನ್ನು ನೀಡುತ್ತಿದೆ. ಜಿಲ್ಲೆಯ ಸಾರ್ವಜನಿಕರು ಸಹಕಾರ ನೀಡಬೇಕು. ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದು ಡಿಸಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

698 ಜನರಲ್ಲಿ ಕೊರೊನಾ ಸೋಂಕು ಪತ್ತೆ
ಧಾರವಾಡ: ಜಿಲ್ಲೆಯಲ್ಲಿ ಮತ್ತೆ ಹೊಸದಾಗಿ 698 ಜನರಲ್ಲಿ ಸೋಂಕು ಪತ್ತೆಯಾಗುವುದರ ಜತೆಗೆ ಗುರುವಾರ ಏಕಾಏಕಿ 800 ಜನ ಸೋಂಕಿತರು ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 3787ಕ್ಕೆ ಇಳಿದಿದೆ. ಗುಣಮುಖರಾದವರ ಸಂಖ್ಯೆ 62,266 ಹಾಗೂ ಒಟ್ಟು ಪಾಸಿಟಿವ್‌ ಸೋಂಕಿತರ ಸಂಖ್ಯೆ 67,382ಕ್ಕೆ ಏರಿಕೆಯಾಗಿದೆ. ಈ ಪೈಕಿ 5 ಜನರಿಗೆ ಐಸಿಯುನಲ್ಲಿ ಮುಂದುವರಿಸಲಾಗಿದ್ದು, ಸೋಂಕಿತರ ಸಾವಿನ ಸಂಖ್ಯೆ 1327ಕ್ಕೆ ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next