Advertisement

24×7 ಕುಡಿವ ನೀರು ಯೋಜನೆಗೆ ಚಾಲನೆ ; ನಗರದ 12 ವಲಯಗಳ ಲೋಕಾರ್ಪಣೆ

12:12 PM Jun 30, 2020 | mahesh |

ಬಳ್ಳಾರಿ: ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ನಿರ್ಮಿಸಲಾಗಿರುವ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ 24/7 ಯೋಜನೆಯ 12 ವಲಯಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸೋಮವಾರ ಲೋಕಾರ್ಪಣೆಗೊಳಿಸಿದರು.

Advertisement

ರಾಘವೇಂದ್ರ ಕಾಲೋನಿ, ತಾರಾನಾಥ, ಗೋನಾಳು, ಬಿಸಿಲಳ್ಳಿ, ದೊಡ್ಡಮಾರುಕಟ್ಟೆ, ಸತ್ಯನಾರಾಯಣಪೇಟೆ, ಬಸವೇಶ್ವರನಗರ, ಮಿಲ್ಲರಪೇಟೆ, ರಾಮಯ್ಯ ಕಾಲೋನಿ, ಬಿಸಿಲಹಳ್ಳಿ ಆಶ್ರಯಕಾಲೋನಿ, ವೆಂಕಟರಮಣ ಕಾಲೋನಿ, ವಾಜಪೇಯಿ ಲೇಔಟ್‌ಗೆ ಇನ್ಮುಂದೆ ನಿರಂತರವಾಗಿ ದಿನದ 24 ಗಂಟೆಯೂ ಕುಡಿಯುವ ನೀರು ಸರಬರಾಜು ಆಗಲಿದೆ. ನಗರದ ಸತ್ಯನಾರಾಯಣಪೇಟೆಯಲ್ಲಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ನಗರದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ 12 ವಲಯಗಳನ್ನು ಇದೀಗ ಉದ್ಘಾಟಿಸುತ್ತಿದ್ದು, ಇನ್ನುಳಿದ 15 ವಲಯಗಳನ್ನು ಡಿ.31ಕ್ಕೆ ಲೋಕಾರ್ಪಣೆಗೊಳಿಸಲಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ತುಂಗಭದ್ರಾ ಜಲಾಶಯದಿಂದ ನೇರ ಬಳ್ಳಾರಿ ನಗರಕ್ಕೆ ನೀರು ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಡಿಪಿಎಆರ್‌ ಬಂದ ನಂತರ ಯಾವ ಅನುದಾನದಡಿ ಇದನ್ನು ಕೈಗೆತ್ತಿಕೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುವುದು. ಜಿಲ್ಲಾ ಖನಿಜ ನಿಧಿಯಡಿ ಬಳ್ಳಾರಿ ನಗರದ ಅಭಿವೃದ್ಧಿಗೆ 500 ಕೋಟಿ ರೂ. ನೀಡಲಾಗಿದೆ ಅಂತ ತಿಳಿದುಬಂದಿದ್ದು, ಯಾವ್ಯಾವ ಅಭಿವೃದ್ಧಿ ಚಟುವಟಿಕೆ ಇದರಡಿ ಕೈಗೊಳ್ಳಬಹುದು ಎಂಬುದನ್ನು ಚರ್ಚಿಸಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಮಾತನಾಡಿ, 2008ರಲ್ಲಿಯೇ ನಿರಂತರ ಕುಡಿಯುವ ನೀರು ಸರಬರಾಜಿನ ಕನಸು ಕಂಡಿದ್ದೆ. ಈಗ ನನಸಾಗ್ತಾ ಇರುವುದು ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್‌.ಆನಂದಸಿಂಗ್‌, ಶಾಸಕರಾದ ಕೆ.ಸಿ. ಕೊಂಡಯ್ಯ, ಅಲ್ಲಂವೀರಭದ್ರಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌, ಕೆಯುಐಡಿಎಫ್‌
ಸಿ-ಎನ್‌ಕೆಯುಎಸ್‌ಐಪಿ ಮುಖ್ಯ ಎಂಜನಿಯರ್‌ ಮತ್ತು ಕಾರ್ಯವ್ಯವಸ್ಥಾಪಕ ಆರ್‌.ಆರ್‌. ದೊಡ್ಡಿಹಾಳ್‌, ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತೆ
ಎಂ.ವಿ.ತುಷಾರಮಣಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next