ಚಿಕ್ಕೋಡಿ: ಗಡಿಯಲ್ಲಿ ಜನರ ಸಂಚಾರ ನಿಯಂತ್ರಿಸಲು ಕರ್ನಾಟಕ-ಮಹಾರಾಷ್ಟ್ರದ ಗಡಿ ಚೆಕ್‌ಪೋಸ್ಟ್ ದಲ್ಲಿ ರಾಜ್ಯದ ವಿವಿಧ ಇಲಾಖೆ ಅಧಿಕಾರಿಗಳು ಠಿಕಾಣಿ ಹೂಡಿದ್ದು, ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಅವಿರತ ಸೇವೆ ಸಲ್ಲಿಸುತ್ತ ಗಡಿ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೋವಿಡ್ ಹರಡಬಾರದು ಎನ್ನುವ ಉದ್ದೇಶದಿಂದ ಕಳೆದ ಮಾರ್ಚ್ 24 ರಿಂದ ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ ತಾಲೂಕಿನ ಕೊಗನ್ನೊಳ್ಳಿ ಚೆಕ್‌ಪೋಸ್ಟ್‌ದಲ್ಲಿ ಕಂದಾಯ, ಪೊಲೀಸ್, ಆರೋಗ್ಯ, ಶಿಕ್ಷಣ, ಸ್ಥಳೀಯ ಸಂಸ್ಥೆಗಳು ಸೇರಿ ಒಂದು ಸಾವಿರಕ್ಕೂ ಅಧಿಕ ಅಧಿಕಾರಿಗಳು ಹಗಲಿರುಳು ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ 300 ಜನ ಕಂದಾಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು, 350 ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಇದ್ದಾರೆ. ಆವರೊಂದಿಗೆ ರಾಜ್ಯದ ಧಾರವಾಡ, ಬಾಗಲಕೋಟ, ಹಾವೇರಿ, ಕೊಪ್ಪಳ, ಮಂಡ್ಯ, ಬೆಂಗಳೂರು, ಹಾಸನ, ದಾವಣಗೇರಿ, ತುಮಕೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಓರ್ವ ನೋಡಲ್ ಅಧಕಾರಿ ಹಾಗೂ ಸಹಾಯಕರಾಗಿ ಇಬ್ಬರಂತೆ ಒಟ್ಟು 100 ಕ್ಕೂ ಅಧಿಕ ಅಧಿ ಕಾರಿಗಳು ಕೊಗನ್ನೊಳ್ಳಿ ಚೆಕ್ ಪೋಸ್ಟ್‌ದಲ್ಲಿ ಸತತ 24 ಗಂಟೆಗಳ ಕಾಲ ಸೇವೆಯಲ್ಲಿ ನಿರತರಾಗಿದ್ದಾರೆ.
ದೇಶದ ಮಹಾರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶ, ಗುಜರಾತ, ಛತ್ತಿಸಘಡ, ಬಿಹಾರ ಮುಂತಾದ ರಾಜ್ಯಗಳಿಂದ ಜನರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸರ್ಕಾರದ ಸೇವಾ ಸಿಂಧು ಆ್ಯಪ್‌ದಲ್ಲಿ ಅನುಮತಿ ಪಡೆದು ಪಾಸ್ ಇದ್ದವರು ಮಾತ್ರ ರಾಜ್ಯದ ಒಳಗೆ ಪ್ರವೇಶ ಮಾಡಬಹುದೆಂದು ಸರ್ಕಾರದ ಕಟ್ಟುನಿಟ್ಟಿನ ಆದೇಶವಾಗಿದೆ.
ದಿನಕ್ಕೆ 500 ರಿಂದ 800 ವಾಹನಗಳ ಆಗಮನ: ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಪ್ರತಿದಿನ ಐದು ನೂರರಿಂದ ಎಂಟು ನೂರು ವಾಹನಗಳು ಬರುತ್ತಿವೆ. ಶುಕ್ರವಾರ ಒಂದೇ ದಿನ 800 ಕ್ಕೂ ಹೆಚ್ಚಿನ ವಾಹನಗಳು ರಾಜ್ಯಕ್ಕ ಆಗಮಿಸಿದ್ದು ಸುಮಾರು 15 ಸಾವಿರ ಜನ ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬಂದಿದ್ದಾರೆ. ವಾಹನಗಳ ತಪಾಸಣೆ, ವಾಹನದಲ್ಲಿ ಇರುವ ಜನರ ಆರೋಗ್ಯ ವಿಚಾರಣೆ, ಪಾಸ್ ಹೀಗೆ ಹಲವು ದಾಖಲೆಗಳ ಪರಿಶೀಲನೆಗಾಗಿ ಚೆಕ್ ಪೋಸ್ಟದಲ್ಲಿ ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಊಟ ಹಾಗೂ ವಸತಿ ವ್ಯವಸ್ಥೆ: ಚೆಕ್ ಪೋಸ್ಟ್‌ದಲ್ಲಿ ಕರ್ತವ್ಯ ನಿರ್ವಹಿಸಲು ಬಂದಿರುವ ಎಲ್ಲ ಅಧಿಕಾರಿ ವರ್ಗದವರಿಗೆ ಜಿಲ್ಲಾಡಳಿತ ಬೆಳಗ್ಗೆ ಚಹಾ, ಊಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಿದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ನಗರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಹೊರ ರಾಜ್ಯಗಳಿಂದ ಬಂದಿರುವ ಜನರಿಗೂ ಸರ್ಕಾರ ಊಟದ ವ್ಯವಸ್ಥೆ ಮಾಡುತ್ತಿದೆ.
ಮಾದರಿ ಚೆಕ್‌ಪೋಸ್ಟ್: ಮೇ 3 ರಿಂದಚೆಕ್ ಪೋಸ್ಟ್‌ದಲ್ಲಿ ಜಿಲ್ಲಾಡಳಿತ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಿದೆ. ಸರ್ಕಾರ ಕೊಗನ್ನೊಳ್ಳಿ ಚೆಕ್‌ಪೋಸ್ಟ್‌ನ್ನು ಮಾದರಿ ಚೆಕ್ ಪೋಸ್ಟ್ ಎಂದು ಬಿಂಬಿಸಿರುವುದು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರೇಪಿಸಿದೆ ಎಂದು ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.
ಎನ್‌ಎಚ್ 4 ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೊಗನ್ನೊಳ್ಳಿ ಚೆಕ್‌ಪೋಸ್ಟ್‌ದಲ್ಲಿ ಕೊಪ್ಪಳ ಜಿಲ್ಲೆಯಿಂದ ನೋಡಲ್ ಅಧಿಕಾರಿಯಾಗಿ ಬಂದಿದ್ದು, ಇಲ್ಲಿಯ ಜಿಲ್ಲಾಡಳಿತ ಜಿಲ್ಲೆಗೊಂದು ಪ್ರತ್ಯೇಕ ಕೌಂಟರ್ ಮಾಡಿ ಜನರಿಗೆ ಅನಾನುಕೂಲವಾಗದಂತೆ ಕ್ರಮ ಕೈಗೊಂಡಿದೆ. ವಿವಿಧ ಜಿಲ್ಲೆಗಳ ಅಧಿಕಾರಿಗಳಿಗೂ ಉತ್ತಮ ಊಟ, ವಸತಿ ವ್ಯವಸ್ಥೆ ಕಲ್ಪಿಸಿದೆ.
-ತಿರುಮಲರಾವ್ ಕುಲಕರ್ಣಿ, ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ, ಕೊಪ್ಪಳ
ಬೆಳಗಾವಿ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ನೆರೆ ಜಿಲ್ಲೆಗಳಿಂದ ಬಂದಿರುವ ಅಧಿಕಾರಿಗಳು ಸತತ 24 ಗಂಟೆಗಳ ಕಾಲ ಕೊಗನ್ನೊಳ್ಳಿ ಚೆಕ್ ಪೋಸ್ಟ್‌ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಊಟ, ವಸತಿ, ಗ್ಲೌಸ್, ಮಾಸ್ಕ, ಸ್ಯಾನಿಟೈಜರ ಕೊಡಲಾಗಿದೆ. ಇಡೀ ರಾಜ್ಯದಲ್ಲಿ ಮಾದರಿ ಚೆಕ್‌ಪೋಸ್ಟ್ ಎಂದು ಬಿಂಬಿತವಾಗಿದೆ.
-ರವೀಂದ್ರ ಕರಲಿಂಗನ್ನವರ, ಎಸಿ, ಚಿಕ್ಕೋಡಿ.
–ಮಹಾದೇವ ಪೂಜೇರಿ