ಕಾರವಾರ: ಕೇಂದ್ರ ಸರ್ಕಾರ ಕರಾವಳಿಯ ಜಿಲ್ಲೆಗಳಲ್ಲಿ ಹಾಗೂ ಕರಾವಳಿ ಬಂದರು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯಕ್ಕೆ ಸೂಚಿಸಿದ ಪರಿಣಾಮ ಇಲ್ಲಿನ ಕರಾವಳಿ ಕಾವಲು ಪಡೆ ಮತ್ತು ಕೋಸ್ಟ್‌ಗಾರ್ಡ್ ಹಾಗೂ ನೇವಿ ಕರಾವಳಿ ತೀರದ ಮೇಲೆ ಕಳೆದ 24 ತಾಸುಗಳಿಂದ ಎಲ್ಲೆಡೆ ಕಣ್ಣಿಟ್ಟಿವೆ. ಕರಾವಳಿ ಮೂಲಕ ಉಗ್ರರು ನುಸುಳಿ ಅನಾಹುತಗಳನ್ನು ಮಾಡಬಹುದು ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ಮಾಹಿತಿ ನೀಡಿತ್ತು. ಅಲ್ಲದೇ ಹೈ ಅಲರ್ಟ್ ಇರುವಂತೆ ಆದೇಶಿಸಿತ್ತು.
ಕರಾವಳಿ ಕಾವಲು ಪಡೆ ತಾಲೂಕಿನ 8 ಬೀಚ್‌ಗಳ ಮೇಲೆ ನಿನ್ನೆಯಿಂದ ಕಣ್ಣಿಟ್ಟಿದೆ. ಅಲ್ಲದೇ ಕೋಸ್ಟ್‌ಗಾರ್ಡ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದೆ. ನೇವಿ ಸಹ ಕಡಲನ್ನು ಕಾಯುತ್ತಿದ್ದು, ಮೀನುಗಾರಿಕಾ ಬೋಟ್‌ಗಳ ಚಾಲಕರಿಗೆ ಸೂಕ್ತ ಎಚ್ಚರಿಕೆ ಸಹ ನೀಡಲಾಗಿದೆ. ಉತ್ತರ ಕನ್ನಡದ ಬಂದರು, ಮೀನುಗಾರಿಕಾ ಬಂದರುಗಳು ಹಾಗೂ ಬೀಚ್‌ಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ನಾಳೆ ಸಂಜೆಯ ವರೆಗೆ ಕಡಲತೀರ ಮತ್ತು ಕಾಳಿ ಸೇತುವೆ. ಅಣೆಕಟ್ಟುಗಳು ಹಾಗೂ ಕೈಗಾ ಅಣುಸ್ಥಾವರ ಪ್ರದೇಶ ಹಾಗೂ ಸೀಬರ್ಡ್ ನೌಕಾನೆಲೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಬೋಟ್‌ಗಳ ಪರಿಶೀಲನೆ: ಕರಾವಳಿ ಕಾವಲು ಪಡೆ ಹೊರ ರಾಜ್ಯದ ಬೋಟ್‌ಗಳ ಕಾಗದ ಪತ್ರ, ಪರವಾನಗಿ ಪತ್ರ ಮತ್ತು ಅಲ್ಲಿನ ಕಾರ್ಮಿಕರ ಗುರುತಿನ ಪತ್ರಗಳನ್ನು ಪರಿಶೀಲನೆ ಮಾಡಿತು. ಮೀನುಗಾರಿಕಾ ಬಂದರು ಮುದಗಾ ಮತ್ತು ಕಾರವಾರಗಳಲ್ಲಿ ವಿಶೇಷ ಕಟ್ಟೆಚ್ಚರ ವಹಿಸಿದ್ದು, ತಪಾಸಣೆ ಕಡ್ಡಾಯ ಮಾಡಲಾಗಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಶಸ್ತ್ರ ಸಜ್ಜಿತ ಸಿಬ್ಬಂದಿ ನಿಯೋಜಿಸಲಾಗಿದೆ. ಕಾರವಾರ ಬಂದರಿನಲ್ಲಿ ಸಿವಿಲ್ ಪೊಲೀಸ್ ಸಿಬ್ಬಂದಿ ಸಹ ಗನ್ ಸಹಿತ ನಿಯೋಜಿಸಲಾಗಿದೆ. ಈತನಕ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ನಗರದಲ್ಲಿ ಹಾಗೂ ಕಡಲತೀರಗಳಲ್ಲಿ ಸಿವಿಲ್ ಪೊಲೀಸರು ಸಹ ಗಸ್ತು ತಿರುಗುತ್ತಿದ್ದು, ಕೇಂದ್ರ ಸರ್ಕಾರದ ಮುಂದಿನ ಸೂಚನೆ ಬರುವ ತನಕ ಹೈ ಅಲರ್ಟ್ ಮುಂದುವರಿಯಲಿದೆ ಎಂದು ಪೊಲೀಸ್ ಇಲಾಖೆ ಉನ್ನತಾಧಿಕಾರಿಗಳು ಹೇಳುತ್ತಿದ್ದಾರೆ. ಕರಾವಳಿ ಕಾವಲು ಪಡೆ ಮತ್ತು ಕೋಸ್ಟ್‌ಗಾರ್ಡ್ ನಿರಂತರ ಕಾರ್ಯದ ಜೊತೆಗೆ ಹೈ ಅಲರ್ಟ್ ದೃಷ್ಟಿಯಿಂದ ಕಡಲತೀರದ ಸೂಕ್ಷ್ಮ ಪ್ರದೇಶದ ಮೇಲೆ ವಿಶೇಷ ನಿಗಾ ಇರಿಸಿದೆ ಎಂದು ಕರಾವಳಿ ಕಾವಲು ಪಡೆಯ ಇನ್ಸಪೆಕ್ಟರ್ ಸಾಯಿನಾಥ ರಾಣೆ ತಿಳಿಸಿದ್ದಾರೆ.