ಬೆಂಗಳೂರು: ರಾಜ್ಯದ ಗಣಿಬಾಧಿತ ಜಿಲ್ಲೆಗಳಲ್ಲಿ ಗಣಿ-ಪರಿಸರ ಪುನಶ್ಚೇತನ ಕಾರ್ಯಕ್ಕೆ ಸಂಗ್ರಹವಾದ ಸುಮಾರು 24 ಸಾವಿರ ಕೋಟಿ ರೂ. ಹಣವನ್ನು ಒಡಿಶಾ ಮಾದರಿಯಲ್ಲಿ ವೆಚ್ಚ ಮಾಡಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಅದರಂತೆ ಇನ್ನು ಮುಂದೆ ಕಾರ್ಯಾನುಷ್ಠಾನಕ್ಕೆ ಸಂಪುಟದ ಒಪ್ಪಿಗೆಗೆ ಕಾಯದೇ ನೇರವಾಗಿ ಇಲಾಖೆ ಅಥವಾ ಸಮಿತಿಯ ಒಪ್ಪಿಗೆಯೊಂದಿಗೆ ಕಾಮಗಾರಿ ನಡೆಸಬಹುದಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬಳ್ಳಾರಿ, ಚಿತ್ರದುರ್ಗ, ರಾಯಚೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಸಮಗ್ರ ಗಣಿ- ಪರಿಸರ ಪುನಶ್ಚೇತನ ಯೋಜನೆಯಡಿ ಈ ಹಣವನ್ನು ಆರೋಗ್ಯ, ಶಿಕ್ಷಣ, ಮೂಲಸೌಕರ್ಯದಂಥ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಈ ವಿಚಾರ ತಿಳಿಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಯ ಲಭಿಸಿದ್ದು, ಒಡಿಶಾ ಮಾದರಿಯಲ್ಲಿ ಅನುಷ್ಠಾನ ಮಾಡಲಾಗುತ್ತದೆ ಎಂದು ವಿವರಿಸಿದರು.
Related Articles
ಸರಕಾರಿ ನೌಕರರ ವೇತನ, ಪಿಂಚಣಿ ಹೆಚ್ಚಳ
ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನ ಅನ್ವಯ ಶೇ. 17ರಷ್ಟು ವೇತನ ಹಾಗೂ ಪಿಂಚಣಿ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ಬುಧವಾರ ಒಪ್ಪಿಗೆ ನೀಡಲಾಗಿದೆ. ಸರಕಾರಿ ನೌಕರರಿಗೆ ಈ ಹಿಂದೆ ನೀಡಿದ್ದ ಭರವಸೆ ಅನ್ವಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ 7246.85 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.
ಮೀನು ಸಂಸ್ಕರಣ ಸ್ಥಾವರ ಮೇಲ್ದರ್ಜೆಗೆ
ಮಂಗಳೂರಿನ ಕುಳಾಯಿಯಲ್ಲಿರುವ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೀನು ಸಂಸ್ಕರಣ ಸ್ಥಾವರವನ್ನು 25 ಕೋಟಿ ರೂ. ವೆಚ್ಚದಲ್ಲಿ (ಕೇಂದ್ರದ ಪಾಲು 10.92 ಕೋಟಿ) ಸಾಗರೋ ತ್ಪನ್ನಗಳ ರಫ್ತು ಘಟಕವಾಗಿ ಉನ್ನತೀಕರಿಸಲು ಅನುಮೋದನೆ ನೀಡಲಾಗಿದೆ.