ಭಾರತೀಯ ಸೇನೆಯ ಹೊಸದಿಲ್ಲಿಯಲ್ಲಿರುವ ರಿಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಯಲ್ಲಿ ಹಾಲಿ ಮತ್ತು ನಿವೃತ್ತ ಯೋಧರು ಸೇರಿದಂತೆ 24 ಮಂದಿಗೆ ಸೋಂಕು ದೃಢಪಟ್ಟಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಇನ್ನೂ ಅನೇಕ ರೋಗಿಗಳ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. 24 ಮಂದಿಗೆ ಕೋವಿಡ್ ದೃಢಪಡುತ್ತಿದ್ದಂತೆ, ಎಲ್ಲ ರೋಗಿಗಳನ್ನೂ ದಿಲ್ಲಿ ಕಂಟೋನ್ಮೆಂಟ್‌ನಲ್ಲಿರುವ ಬೇಸ್ ಹಾಸ್ಪಿಟಲ್‌ಗೆ ಸ್ಥಳಾಂತರಿಸಲಾಗಿದೆ.
ಇದೇ ವೇಳೆ, ಕೋವಿಡ್ ಸೋಂಕು ತಗುಲಿದ ಬಿಎಸ್‌ಎಫ್ ಯೋಧರ ಸಂಖ್ಯೆ ಮಂಗಳವಾರ 67ಕ್ಕೇರಿಕೆಯಾಗಿದೆ. ಅತಿ ಹೆಚ್ಚು ಪ್ರಕರಣಗಳು ದಿಲ್ಲಿ ಬೆಟಾಲಿಯನ್‌ನಲ್ಲಿ ಪತ್ತೆಯಾಗಿದ್ದರೆ, ತ್ರಿಪುರದಲ್ಲಿ 24 ಕೇಸು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ಆದೇಶ: ಈ ನಡುವೆ, ಸಿಆರ್‌ಪಿಎಫ್ 31ನೇ ಬೆಟಾಲಿಯನ್‌ನಲ್ಲಿ 137 ಮಂದಿ ಯೋಧರಿಗೆ ಸೋಂಕು ತಗುಲಿರುವ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
45 ಐಟಿಬಿಪಿ ಸಿಬಂದಿಗೆ ಸೋಂಕು: ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್‌ನ (ಐಟಿಬಿಪಿ) 45 ಯೋಧರಿಗೆ ಕೋವಿಡ್ ತಗುಲಿರುವುದು ಮಂಗಳವಾರ ದೃಢಪಟ್ಟಿದೆ. ಟಿಗ್ರಿ ಕ್ಯಾಂಪ್‌ನಲ್ಲಿ ತಂಗಿದ್ದ ನಿವೃತ್ತ ಐಟಿಬಿಪಿ ಅಧಿಕಾರಿಯೊಬ್ಬರು ಭಾನುವಾರ ಕೋವಿಡ್ ವೈರಸ್ ನಿಂದ ಮೃತಪಟ್ಟಿದ್ದರು.
ಇವರಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸೋಮವಾರ 21 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಮಂಗಳವಾರ ಈ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. ಟಿಗ್ರಿ ಕ್ಯಾಂಪ್ ಅನ್ನು ಸೀಲ್ ಮಾಡಲಾಗಿದ್ದು, ಒಂದು ಸಾವಿರ ಐಟಿಬಿಪಿ ಸಿಬಂದಿ ಮೇಲೆ ನಿಗಾವಹಿಸಲಾಗಿದೆ. 91 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.