ಬಸವಕಲ್ಯಾಣ: ಶಾಲೆಗಳು ಶುರುವಾಗಿ ಬರೊಬ್ಬರಿ ಎರಡು ತಿಂಗಳು ಕಳೆಯುತ್ತ ಬಂದರೂ ಕೆಲವೇ ಕೆಲವು ಶಾಲೆಗಳ ವಿದ್ಯಾರ್ಥಿಗಳಿಗೆ ಸೈಕಲ್ ದೊರೆತಿದ್ದು, ಹಲವು ಶಾಲೆಗಳ ವಿದ್ಯಾರ್ಥಿಗಳ ಕೈಗೆ ಇನ್ನು ಸೈಕಲ್ ದೊರೆತಿಲ್ಲ.
ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸರ್ಕಾರ ಈ ಸೈಕಲ್ಗಳನ್ನು ಉಚಿತವಾಗಿ ವಿತರಿಸುತ್ತಿದ್ದು, ಈ ಸಲ ವಿಳಂಬವಾಗಿದ್ದರಿಂದ ಸಾರಿಗೆಗೆ ಹಣ ಖರ್ಚು ಮಾಡಿ ಶಾಲೆಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಗೆ ಒಳಪಡುವ ತಾಲೂಕಿನ 114 ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ವರ್ಷ 8ನೇ ತರಗತಿಗೆ ಪ್ರವೇಶ ಪಡೆದ 3,626 ವಿದ್ಯಾರ್ಥಿಗಳ ಪೈಕಿ ಕೇವಲ 1,300 ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಸೈಕಲ್ ವಿತರಿಸಲಾಗಿದ್ದು, ಇನ್ನೂ 2,326 ವಿದ್ಯಾರ್ಥಿಗಳಿಗೆ ಸೈಕಲ್ಗಳನ್ನು ವಿತರಿಸಬೇಕಿದೆ.
ಯಡಿಯೂರಪ್ಪನವರು ಆಗ ಮುಖ್ಯಮಂತ್ರಿ ಆಗಿದ್ದಾಗ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಉಚಿತ ಸೈಕಲ್ ವಿತರಣೆ ಯೋಜನೆ ಜಾರಿಗೆ ತಂದಿದ್ದರು. ಆದರೆ ಟೆಂಡರ್ ಪಡೆದ ಗುತ್ತಿಗೆದಾರರು ಶಾಲೆಗಳಿಗೆ ಜೂನ್ ತಿಂಗಳಲ್ಲೇ ಬಿಡಿ ಭಾಗಗಳನ್ನು ಪೂರೈಸುವ ಬದಲು, ಈಗ 15 ದಿವಸಗಳ ಹಿಂದಷ್ಟೆ ಪೂರೈಸಿದ್ದಾರೆ. ಹೀಗಾಗಿ ಅವುಗಳನ್ನು ಬಂಗ್ಲಾ ರಸ್ತೆಯ ಹಳೆ ವಿದ್ಯಾಪೀಠದ ಕಟ್ಟಡದಲ್ಲಿ ಜೋಡಿಸಲಾಗುತ್ತಿದ್ದು, ಪ್ರತಿನಿತ್ಯ ಜೋಡಣೆಯಾದಷ್ಟು ಸೈಕಲ್ಗಳನ್ನು ಆಯಾ ಶಾಲೆಗಳಿಗೆ ವಿತರಿಸಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಶಾಲೆಗಳಿಗೆ ಸೈಕಲ್ ವಿತರಿಸಲಾಗುವುದು ಎಂದು ಮಂಠಾಳ ಬಿಆರ್‌ಸಿ ವಿನೋದ ರಾಠೊಡ ತಿಳಿಸಿದ್ದಾರೆ.
ಶಾಲೆ ಆರಂಭದಲ್ಲೇ ಬರಬೇಕಿದ್ದ ಸೈಕಲ್ನ ಬಿಡಿ ಭಾಗಗಳು, ಈಗ 15 ದಿನಗಳ ಹಿಂದಷ್ಟೆ ಬಂದಿವೆ. ಜೋಡಿಸಲಾದ ಸೈಕಲ್ಗಳನ್ನು ನಿತ್ಯ ಶಾಲೆಗಳಿಗೆ ಪೂರೈಸಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಶಾಲೆಗಳಿಗೆ ವಿತರಿಸಲು ಪ್ರಯತ್ನಿಸಲಾಗುವುದು.
•ವಿನೋದ ರಾಠೊಡ, ಬಿಆರ್‌ಸಿ
ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದಿವೆ. ಬಹುತೇಕ ಶಾಲೆಗಳಲ್ಲಿ ಸೈಕಲ್ ವಿತರಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಆದಷ್ಟು ಬೇಗ ಎಲ್ಲ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು.
•ಲೋಕೇಶ ಮೋಳಕೇರೆ, ಎಬಿವಿಪಿ ಮುಖಂಡ
•ವೀರಾರೆಡ್ಡಿ ಆರ್.ಎಸ್.