Advertisement

23 ವರ್ಷ ಬಳಿಕ ಜೈಲಿನಿಂದ ಹೊರಬಂದ ತಂದೆಯನ್ನು ಕಾಣುತ್ತಲೇ ಪುತ್ರನ ಸಾವು

12:13 PM Jan 19, 2017 | Team Udayavani |

ಕೊಲ್ಹಾಪುರ : 1996ರಲ್ಲಿ ಹಸನ್‌ಗೆ ಬಾಂಬೇ ಹೈಕೋರ್ಟ್‌ ಜೀವಾವಧಿ ಜೈಲು ಶಿಕ್ಷೆಯನ್ನು ದೃಢಪಡಿಸಿದಾಗ ಆತನ ಪುತ್ರ ಸಾಜಿದ್‌ ಮಕ್ವಾನಾಗೆ ಆಗಿನ್ನೂ ಕೇವಲ ನಾಲ್ಕು ವರ್ಷ ಪ್ರಾಯ. ಜೀವಾವಧಿ ಜೈಲು ಶಿಕ್ಷೆಯ ಅವಧಿಯಲ್ಲಿ ಹಸನ್‌ ಎಂದೂ ಪೆರೋಲ್‌ಗೆ ಅರ್ಜಿ ಹಾಕಿರಲಿಲ್ಲ. ಹಾಗಾಗಿ 23 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ ಹಸನ್‌ ನನ್ನು ಮೊನ್ನೆ ಮಂಗಳವಾರ ಇಲ್ಲಿನ ಕಲಾಂಬಾ ಸೆಂಟ್ರಲ್‌ ಜೈಲಿನಿಂದ ಬಿಡುಗಡೆಗೊಳಿಸಲಾಯಿತು.

Advertisement

ಅಪ್ಪ ಜೈಲಿನಿಂದ ಬಿಡುಗಡೆಯಾಗುತ್ತಿರುವ ಸುದ್ದಿ ಕೇಳಿದೊಡನೆಯೇ 24ರ ಹರೆಯದ ಸಾಜಿದ್‌ ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ತಂದೆಯನ್ನು ಕಾಣುವ ಆತನಲ್ಲಿನ ಉತ್ಕಟವಾದ ಆಸೆ ಮತ್ತು ಅದಮ್ಯವಾದ ಭಾವನೆಯೇ ಆತನಿಗೆ ಮುಳುವಾಯಿತು. ಬಂಧಮುಕ್ತ ತಂದೆಯನ್ನು ಕಾಣುತ್ತಲೇ ಆತನಿಗೆ ಹಠಾತ್ತನೇ ಎದೆ ನೋವು ಕಾಣಿಸಿಕೊಂಡಿತು. ಪರಿಣಾಮವಾಗಿ ಆತ ಹೃತ್‌ ಕ್ರಿಯೆ ನಿಂತ ಕೊನೆಯುಸಿರೆಳೆದ ! 

65ರ ಹರೆಯದ ಹಸನ್‌ ಮಂಗಳವಾರ ಮಧ್ಯಾಹ್ನ ಜೈಲಿನಿಂದ ಬಿಡುಗಡೆಗೊಂಡು ಹೊರಗೆ ಬಂದವರೇ ಒಮ್ಮೆ ಬಂಧೀಖಾನೆಗೆ ಸೆಲ್ಯೂಟ್‌ ಹೊಡೆದರು. ಜೈಲಿನ ಇನ್ನೊಂದು ಕಡೆ ಪುತ್ರ ಸಾಜಿದ್‌ ಸಹಿತವಾಗಿ ಆತನ ಕುಟುಂಬದವರು ಕಾರಿನಲ್ಲಿ ಕಾಯುತ್ತಿದ್ದರು. 

ಜೈಲಿನಿಂದ ಬಿಡುಗಡೆಗೊಂಡು ಹೊರ ಬಂದ ತಂದೆ ಹಸನ್‌ ಅವರನ್ನು ಕಾಣುತ್ತಲೇ ಪುತ್ರ ಸಾಜಿದ್‌ಗೆ ತನ್ನೊಳಗಿನ ಉತ್ಕಟವಾದ ಭಾವನೆಗಳನ್ನು ತಡೆಹಿಡಿಯಲಾಗಲಿಲ್ಲ. ತಂದೆ ಹಸನ್‌ ಕಡೆಗೆ ನಡೆದುಕೊಂಡು ಹೋಗುತ್ತಿದ್ದಂತೆಯೇ ಸಾಜಿದ್‌ಗೆ ಎದೆ ನೋವು ಕಾಣಿಸಿಕೊಂಡಿತ್ತು. ಆತ ಕುಸಿದು ಬಿದ್ದ; ಒಡನೆಯೇ ಆತನನ್ನು ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತು ಆದರೆ ಆತ ಅದಾಗಲೇ ಹಠಾತ್‌ ಹೃತ್‌ಕ್ರಿಯೆ ನಿಂತು ನಿಧನ ಹೊಂದಿರುವುದಾಗಿ ವೈದ್ಯರು ಘೋಷಿಸಿದರು. 

1977ರಲ್ಲಿ ಹಸನ್‌ ವ್ಯಕ್ತಿಯೊಬ್ಬನೊಂದಿಗೆ ಜಗಳವಾಡಿದ್ದಾಗ ಆ ವ್ಯಕ್ತಿ ಗಾಯಗಳಿಂದ ಸತ್ತಿದ್ದ. ಆ ಪ್ರಕರಣದಲ್ಲಿ ಹಸನ್‌ ಬಂಧಿತನಾಗಿ, ವಿಚಾರಣೆಗೆ ಗುರಿಯಾಗಿ, ಬಳಿಕ ಜೀವಾವಧಿ ಜೈಲು ಶಿಕ್ಷೆಗೆ ಒಳಗಾಗಿದ್ದ. ಆಗ ಆತನ ಮಗ ಸಾಜಿದ್‌ ಕೇವಲ 4 ವರ್ಷದವನಾಗಿದ್ದ.

Advertisement

ಬೆಳೆದು ದೊಡ್ಡವನಾದ ಸಾಜಿದ್‌ ಈಚೆಗಷ್ಟೇ ಮುಂಬಯಿ ಅಂಧೇರಿಯಲ್ಲಿ ಮೋಟಾರು ಡ್ರೈವಿಂಗ್‌ ಸ್ಕೂಲ್‌ ಆರಂಭಿಸಿದ್ದ. ತಂದೆ ಜೈಲಿನಿಂದ ಬಿಡುಗಡೆಗೊಂಡ ಬಳಿಕ ತಾನು ಮದುವೆಯಾಗುವ ಬಗ್ಗೆಯೂ ಆಲೋಚಿಸಿದ್ದ. ಆದರೆ ವಿಧಿಯ ಲೀಲೆಯ ಬೇರೆ ಇತ್ತು. 

“ಹಸನ್‌ 1981ರಲ್ಲಿ ಮುಂಬಯಿ ಹೈಕೋರ್ಟಿನಿಂದ ಜಾಮೀನು ಪಡೆದಿದ್ದ. ಆದರೆ 1996ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಖಾತರಿಯಾಯಿತು. ಆತನನ್ನು ಯೆರವಾಡ ಜೈಲಿಗೆ ಕಳುಹಿಸಲಾಯಿತು. ಅಲ್ಲಿಂದ 2015ರ ನವೆಂಬರ್‌ನಲ್ಲಿ ಕಲಾಂಬಾ ಜೈಲಿಗೆ ಕಳುಹಿಸಲಾಯಿತು. ಜೀವಾವಧಿ ಜೈಲು ಶಿಕ್ಷೆಯ ವೇಳೆ ಎಂದೂ ಪೆರೋಲ್‌ ಕೇಳಿರಲಿಲ್ಲ; ಕುಟುಂಬದವರೊಂದಿಗೆ ಜೈಲಿನ ಆವರಣದಿಂದ ಕೇವಲ ಫೋನ್‌ನಲ್ಲಿ ಮಾತನಾಡುತ್ತಿದ್ದ.  ಆತನನ್ನು ಜ.17ರಂದು ಬಿಡುಗಡೆ ಮಾಡುವಂತೆ ಸರಕಾರದಿಂದ ಪತ್ರ ಬಂದಿತ್ತು. ಹಾಗೆ ಬಿಡುಗಡೆಗೊಂಡ ದಿನವೇ ಆತನಿಗೆ ಪುತ್ರನ ಸಾವನ್ನು ಕಾಣುವ ದೌರ್ಭಾಗ್ಯ ಒದಗಿತು’ ಎಂದು ಜೈಲಿನ ಸುಪರಿಂಟೆಂಡೆಂಟ್‌ ಶರದ್‌ ಶೇಲ್ಕೆ ಅವರು ವಿಷಾದಿದಿಂದ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next