ಶ್ರೀನಗರ: ಫೆ.14ರಂದು ಸಿಆರ್‌ಪಿಎಫ್ನ 40 ಯೋಧರನ್ನು ಬಲಿತೆಗೆದು ಕೊಂಡ ಪುಲ್ವಾಮಾ ಭಯೋತ್ಪಾದಕ ದಾಳಿ ಹಿಂದಿನ ಮಾಸ್ಟರ್‌ಮೈಂಡ್ ಬೇರ್ಯಾರೂ ಅಲ್ಲ, 23 ವರ್ಷದ ಎಲೆಕ್ಟ್ರಿಷಿಯನ್!
ದಾಳಿ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸಂಗ್ರಹಿಸಿದ ಸಾಕ್ಷ್ಯಗಳೇ ಈ ಆಘಾತಕಾರಿ ವಿಚಾರವನ್ನು ಬಹಿರಂಗ ಪಡಿಸಿದೆ. ಪುಲ್ವಾಮಾದವನೇ ಆಗಿರುವ ಪದವೀಧರ, 23 ವರ್ಷದ ಎಲೆಕ್ಟ್ರಿಷಿಯನ್ ಹಾಗೂ ಜೈಶ್-ಎ-ಮೊಹಮ್ಮದ್ ಉಗ್ರ ಮುದಸ್ಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹಮ್ಮದ್ ಭಾಯಿ ಎಂಬಾತನೇ ದಾಳಿಯ ಸಂಚುಕೋರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತ್ರಾಲ್‌ನ ಮೀರ್ ಮೊಹಲ್ಲಾದಲ್ಲಿ ಈತನ ಮನೆಯಿದ್ದು, ದಾಳಿಗೆ ಬೇಕಾದ ವಾಹನ ಹಾಗೂ ಸ್ಫೋಟಕಗಳನ್ನು ರೆಡಿ ಮಾಡಿ ಕೊಟ್ಟಿದ್ದೂ ಈತನೇ ಎಂಬುದಕ್ಕೆ ಸಾಕ್ಷ್ಯಗಳೂ ಲಭ್ಯವಾಗಿವೆ. ಪದವಿ ಪಡೆದ ಬಳಿಕ ಖಾನ್ ಐಟಿಐನಲ್ಲಿ ಒಂದು ವರ್ಷ ಎಲೆಕ್ಟ್ರಿಷಿಯನ್ ಡಿಪ್ಲೊಮಾ ಮಾಡಿದ್ದ. 2017ರಲ್ಲೇ ಮುದ ಸ್ಸಿರ್ ಜೈಶ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರೂ, ಸಕ್ರಿ ಯ ಕಾರ್ಯಕರ್ತನಾಗಿ ರಲಿಲ್ಲ. 2017ರ ಡಿಸೆಂಬರ್‌ನಲ್ಲಿ ಜೈಶ್‌ನ ಸ್ಥಳೀಯ ಕಮಾಂಡರ್ ನೂರ್ ಮೊಹಮ್ಮದ್ ತಂತ್ರೆ ಹತ್ಯೆಗೀಡಾದ ಸುದ್ದಿ ಕೇಳುತ್ತಲೇ, ಮುದಸ್ಸಿರ್ ಮನೆ ಬಿಟ್ಟು ಹೋಗಿ, ಜೈಶ್‌ನ ಸಕ್ರಿಯ ಸದಸ್ಯನಾದ. ಫೆ.14ರಂದು ಪುಲ್ವಾಮಾದಲ್ಲಿ ಆದಿಲ್ ಅಹ್ಮದ್ ದರ್ ಆತ್ಮಾಹುತಿ ದಾಳಿ ನಡೆಸುವ ಮುನ್ನ ಮುದ ಸ್ಸಿರ್‌ನೊಂದಿಗೆ ಸತತ ಸಂಪರ್ಕದಲ್ಲಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್‌ನಿಂದ ಶೆಲ್ ದಾಳಿ: ಇದೇ ವೇಳೆ, ರವಿವಾರ ಜಮ್ಮು-ಕಾಶ್ಮೀರ ಪೂಂಛ… ಜಿಲ್ಲೆಯ 4 ಪ್ರದೇಶಗಳಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿದೆ. ಮುಂಚೂಣಿ ನೆಲೆಗಳು ಹಾಗೂ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಸತತ ಶೆಲ್ ದಾಳಿ ನಡೆಸಲಾ ಗಿದ್ದು, ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ. ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ.