Advertisement

ಪೋಲಿಯೋ ಲಸಿಕೆಗೆ 23 ಮೊಬೈಲ್‌ ತಂಡ ರಚನೆ

05:54 PM Feb 18, 2022 | Team Udayavani |

ಬೆಳಗಾವಿ: ಅಲೆಮಾರಿ ಜನಾಂಗ, ಗುಡ್ಡಗಾಡು ನಿವಾಸಿಗಳು ಹಾಗೂ ವಲಸೆ ಕಾರ್ಮಿಕರ ಮಕ್ಕಳು ಸೇರಿದಂತೆ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಜನವಸತಿ ಹೊರತುಪಡಿಸಿ ಬೇರೆ ಕಡೆಗಳಲ್ಲಿ ವಾಸಿಸುವ ಮಕ್ಕಳಿಗೆ ಲಸಿಕೆ ನೀಡಲು 23 ಮೊಬೈಲ್‌ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಫೆ.27ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೋಲಿಯೋ ಮುಕ್ತ ಭಾರತ ಮಾಡಲು ಎಲ್ಲ ಪೋಷಕರು, ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳು ಕೈ ಜೋಡಿಸಬೇಕು ಎಂದು ಹೇಳಿದರು.

ಕಳೆದ 2011ರಿಂದ ದೇಶದಲ್ಲಿ ಯಾವುದೇ ವೈಲ್ಡ್‌ ಪೊಲಿಯೋ ವೈರಸ್‌ ಪ್ರಕರಣಗಳು ಕಂಡುಬಂದಿಲ್ಲ. 2017ರಲ್ಲಿ ಕೊನೆಯದಾಗಿ ಬಿಹಾರ ಮೂಲದ ಕಾರ್ಮಿಕರ ಮಕ್ಕಳಲ್ಲಿ ಬೆಂಗಳೂರಿನಲ್ಲಿ ಪೋಲಿಯೋ ಪ್ರಕರಣ ವರದಿಯಾಗಿತ್ತು. 21 ವರ್ಷದಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದರು.

ತಾಲೂಕು ಮಟ್ಟದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರರ ಸಹಯೋಗದಲ್ಲಿ ತಾಲೂಕು ಟಾಸ್ಕ್ಫೋಸ್‌ ಗಳನ್ನು ರಚಿಸಬೇಕು. ಗ್ರಾಮ ಮಟ್ಟದಲ್ಲಿ ಪಿಡಿಒ ಮತ್ತು ಸಿಬ್ಬಂದಿಗಳು ಜನರಲ್ಲಿ ಪೋಲಿಯೋ ಜಾಗೃತಿ ಮೂಡಿಸಬೇಕು. ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತಗೊಳ್ಳದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಎನ್‌ಸಿಸಿ, ಎನ್‌ಎಸ್‌ಎಸ್‌, ನರ್ಸಿಂಗ್‌ ವಿದ್ಯಾರ್ಥಿಗಳು ಹಾಗೂ ರೋಟರಿ, ಲಯನ್ಸ್‌, ಶಿಕ್ಷಣ ಇಲಾಖೆಯಿಂದ ಜಾಥಾ ಕಾರ್ಯಕ್ರಮ, ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಲ್ಲಿ ಬೂತ್‌ಗಳ ಮೂಲಕ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

Advertisement

ಫೆ.27ರಂದು ಪೋಲಿಯೋ ಭಾನುವಾರ ಕಾರ್ಯಕ್ರಮ ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಒಟ್ಟು ನಾಲ್ಕು ದಿನಗಳ ಕಾಲ ಪೋಲಿಯೋ ಕಾರ್ಯಕ್ರಮ ನಡೆಸಲಾಗುವುದು. ಮೊದಲನೇ ದಿನ ಪೋಲಿಯೋ ಬೂತ್‌ಗಳಲ್ಲಿ ಪೋಲಿಯೋ ಹನಿ ನೀಡಲಾಗುವುದು ಮತ್ತು ಅನಿವಾರ್ಯ ಕಾರಣಗಳಿಂದ ಲಸಿಕೆ ವಂಚಿತ ಮಕ್ಕಳಿಗೆ ಮನೆ-ಮನೆಗೆ ತೆರಳುವ ಮೂಲಕ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು ಎಂದು ಆರ್‌ಸಿಎಚ್‌ಒ
ಡಾ| ಈಶ್ವರ ಗಡಾದ ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್‌.ವಿ. ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|ಬಾಲಕೃಷ್ಣ ತುಕ್ಕಾರ ಸೇರಿದಂತೆ ಇತರರಿದ್ದರು.

ಜಿಲ್ಲೆಯಲ್ಲಿ ಒಟ್ಟು 2397 ಪೋಲಿಯೋ ಬೂತ್‌ ಸ್ಥಾಪಿಸಲಾಗಿದೆ. ಅಲ್ಲದೇ ಬಸ್‌ ಹಾಗೂ ರೈಲ್ವೆ ನಿಲ್ದಾಣ ಮುಂತಾದ ಕಡೆಗಳಲ್ಲಿ ಟ್ರಾನ್ಸಿಟ್‌ ಬೂತ್‌ಗಳನ್ನು ಸ್ಥಾಪಿಸಿದ್ದು, 9435 ಕಾರ್ಯಕರ್ತೆಯರು ಹಾಗೂ 647 ಮೇಲ್ವಿಚಾರಕರನ್ನು ನೇಮಿಸಲಾಗಿದೆ.
∙ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next