Advertisement

ಚೆನ್ನೈ ವಿಮಾನ ನಿಲ್ದಾಣದಲ್ಲಿ 23ಕೆಜಿ ಶಾರ್ಕ್ ರೆಕ್ಕೆ ವಶ: ಇದರಿಂದ ಏನು ತಯಾರಿಸುತ್ತಾರೆ?

11:37 AM Oct 29, 2020 | Nagendra Trasi |

ಚೆನ್ನೈ: ಶಾರ್ಕ್ ಮೀನಿನ ಸಂಸ್ಕರಿಸಿದ 23.5ಕೆಜಿ ರೆಕ್ಕೆಗಳನ್ನು ದುಬೈಗೆ ಕಳ್ಳ ಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರನ್ನು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಘಟಕದ ಅಧಿಕಾರಿಗಳು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದು, ಇದರ ಮೌಲ್ಯ 16.5 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ ನಂತರ ಇದೇ ಮೊದಲ ಬಾರಿಗೆ ವನ್ಯ ಜೀವಿ/ಸಮುದ್ರ ಜೀವಿಗಳ ಉತ್ಪನ್ನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, 2019ರ ಡಿಸೆಂಬರ್ ನಲ್ಲಿ ಶಾರ್ಕ್ ಮೀನಿನ ರೆಕ್ಕೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ದುಬೈಗೆ ವನ್ಯ/ಸಮುದ್ರ ಜೀವಿಗಳ ಉತ್ಪನ್ನ ಕಳ್ಳಸಾಗಣೆಯಾಗಲಿದೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಅನುಮಾನಾಸ್ಪದ ಪ್ರಯಾಣಿಕರ ಮೇಲೆ ಕಣ್ಗಾವಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದೊಳಕ್ಕೆ ರಟ್ಟಿನ(ಕಾರ್ಟನ್) ಪೆಟ್ಟಿಗೆಯೊಂದಿಗೆ ಆಗಮಿಸಿದ್ದ ಇಬ್ಬರು ಪ್ರಯಾಣಿಕರ ಅನುಮಾನಾಸ್ಪದ ಚಲನವಲನ ಗಮನಿಸಲಾಗುತ್ತಿತ್ತು. ನಂತರ ಇಮಿಗ್ರೇಶನ್ ಪ್ರಕ್ರಿಯೆ ಮುಕ್ತಾಯಗೊಂಡ ಕೂಡಲೇ ಭದ್ರತಾ ತಪಾಸಣೆಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ:ಮಿನಿಸಮರ: ಶಿರಾ ಕ್ಷೇತ್ರದ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಿದ್ದೇ ಹೆಚ್ಚು!

Advertisement

ರಟ್ಟಿನ ಬಾಕ್ಸ್ ಗಳ ಬಗ್ಗೆ ಪ್ರಶ್ನಿಸಿದಾಗ ಹಾರಿಕೆಯ ಉತ್ತರ ನೀಡಿದ್ದನ್ನು ಕೇಳಿ, ಅಧಿಕಾರಿಗಳು ಬಾಕ್ಸ್ ಗಳನ್ನು ಪರಿಶೀಲಿಸಿದಾಗ ಅದರೊಳಗೆ ಮೂರು ಗೋಣಿ ಚೀಲ ಪತ್ತೆಯಾಗಿತ್ತು. ಅದರಲ್ಲಿ ಶಾರ್ಕ್ ಮೀನಿನ ರೆಕ್ಕೆ ಇದ್ದು, 9.5 ಕೆಜಿ ಹೊಂದಿತ್ತು. ಮತ್ತೆ ಎರಡು ಬ್ಯಾಗ್ ಸೇರಿ ಒಟ್ಟು 14 ಕೆಜಿ ಶಾರ್ಕ್ ರೆಕ್ಕೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಯಾಣಿಕರನ್ನು ಚೆನ್ನೈನ ಸಥ್ತಾಕ್ಕಾತುಲ್ಲಾ(52) ಹಾಗೂ ತಿರುಚಿರಾಪ್ಪಲಿಯ ಅಬ್ಬಾಸ್ (29ವರ್ಷ) ಎಂದು ಗುರುತಿಸಲಾಗಿದೆ. ಇವರ ಪಾಸ್ ಪೋರ್ಟ್ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ದುಬಾರಿ ಸೂಪ್ ಗೆ ಬಳಕೆ:

ಶಾರ್ಕ್ ಮೀನಿನ ರೆಕ್ಕೆಗಳ ಸೂಪ್ ತುಂಬಾ ದುಬಾರಿಯಾಗಿದ್ದು, ಇದು ವಿದೇಶದ ಐಶಾರಾಮಿ ರೆಸ್ಟೋರೆಂಟ್ ಗಳಲ್ಲಿ ಲಭ್ಯವಿದೆ. ಚೀನಾದಲ್ಲಿ ಶಾರ್ಕ್ ರೆಕ್ಕೆ ಬಹುಬೇಡಿಕೆ. ಚೀನಾ ಜನರು ಇದನ್ನು ಸಮೃದ್ಧಿ, ಸ್ಥಾನಮಾನ ಮತ್ತು ಆರೋಗ್ಯದ ಸಂಕೇತವೆಂದು ಪರಿಗಣಿಸುತ್ತಾರಂತೆ. ಶಾರ್ಕ್ ಮೀನಿನ ರೆಕ್ಕೆಗಳ ವ್ಯವಹಾರದ ಪರಿಣಾಮವಾಗಿ ಜಾಗತಿಕವಾಗಿ ಶಾರ್ಕ್ ಸಂತತಿಯ ನಾಶಕ್ಕೆ ಕಾರಣವಾಗುತ್ತಿದೆ ಎಂದು ವರದಿ ತಿಳಿಸಿದೆ. ಒಂದು ಬೌಲ್ ಶಾರ್ಕ್ ಸೂಪ್ ಗೆ 100 ಡಾಲರ್ ಮೊತ್ತ(ಅಂದಾಜು 7,300 ರೂಪಾಯಿ!). ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಪೌಂಡ್ (453ಗ್ರಾಂ) ಶಾರ್ಕ್ ರೆಕ್ಕೆಯ ಬೆಲೆ 450 ಡಾಲರ್ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next