ದೊಡ್ಡಬಳ್ಳಾಪುರ: ಬೆವರು ಬಸಿಯುವವರಿಗೆ ನಷ್ಟ. ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವವರಿಗೆ ಜೇಬು ತುಂಬ ಕಾಸು. ಕೃಷಿ ನಾಶವಾದರೆ ಸಮಾನತೆಯೂ ನಾಶವಾಗುತ್ತದೆ ಎಂದು ಬರಹಗಾರ ಮಂಜುನಾಥ ಎಂ. ಅದ್ದೆ ಹೇಳಿದರು.
ನಗರದ ಬಸವ ಭವನದಲ್ಲಿ ನಡೆದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಆರ್ಥಿಕತೆ ಕುರಿತು ಮಾತನಾಡಿದ ಅವರು, ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ರೂಪಿಸಿದ್ದ ಕೃಷಿ ಇಂದು ಆಪತ್ತಿನಲ್ಲಿದೆ. ಇಡೀ ದೇಶವನ್ನು ಉದ್ದುದ್ದವಾಗಿ ಪೂರ್ವ ಭಾರತ ಮತ್ತು ಪಶ್ಚಿಮ ಭಾರತ ಎಂದು ವಿಂಗಡಿಸಿದರೆ, ಪಶ್ಚಿಮ ಭಾರತದಲ್ಲಿ ಕೃಷಿ ಸಮೃದ್ಧವಾಗಿದೆ. ಆದರೆ, ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಪೂರ್ವ ಭಾರತದ ಪ್ರಾಬಲ್ಯ ಹೆಚ್ಚಾಗಿದೆ ಎಂದರು.
ಎಲ್ಲರೂ ಜಾಗೃತರಾಗಬೇಕು: ಕೃಷಿ ಉತ್ಪನ್ನಗಳ ಬೆಲೆಯನ್ನು ಪ್ರಸ್ತಾಪಿಸಿದ ಅವರು, ರಾಗಿ-ಜೋಳಕ್ಕೆ 30 ವರ್ಷ ಹಿಂದೆ ಇದ್ದ ಬೆಲೆ ಈಗಲೂ ಇದೆ. ಅಲ್ಪಸ್ವಲ್ಪ ಮಾತ್ರ ಬದಲಾವಣೆಯಾಗಿದೆ. ಇತರ ಉತ್ಪನ್ನಗಳಿಗೆ ಹೋಲಿಸಿದರೆ ಇವುಗಳ ಬೆಂಬಲ ಬೆಲೆ ಏನೇನೂ ಅಲ್ಲ. 50 ವರ್ಷಗಳ ಕಾಲ ಉಪ್ಪಿನ ಬೆಲೆ 1 ರಿಂದ 2 ಮೀರಿರಲಿಲ್ಲ. ಆದರೆ, ಕಾರ್ಪೋರೇಟ್ ಕಂಪನಿಗಳ ಪ್ರವೇಶವಾಗಿದ್ದೇ ತಡ ಅವು ಹಲವು ಮಿತಿಗಳನ್ನು ಹಬ್ಬಿಸಿದವು. ಆಯೋಡಿನ್ ಯುಕ್ತ ಉಪ್ಪು ಅಲ್ಲದಿದ್ದರೆ ಜೀವವೇ ಹೋಗಿ ಬಿಡುತ್ತದೆ ಎಂದು ನಂಬಿಸಿದವು. ಈಗ ಒಂದು ಕೆ.ಜಿ. ಉಪ್ಪು 30 ರೂ.ಆಗುತ್ತಿದೆ. ಕೇಂದ್ರ ತಂದಿರುವ ಕೃಷಿ ಕಾಯ್ದೆ ಭಾರತದ ಕೃಷಿಯ ಬಹುತ್ವವನ್ನೇ ನಾಶ ಮಾಡುತ್ತದೆ. ತಾತ್ಕಾಲಿಕ ಲಾಭದ ಆಸೆ ತೋರಿಸುವ ಕಂಪನಿ ಆನಂತರ ಕೃಷಿಕರನ್ನು ತಬ್ಬಲಿಗಳನ್ನಾಗಿಸುತ್ತವೆ. ಈ ಕುರಿತು ಎಲ್ಲರೂ ಜಾಗೃತರಾಗಬೇಕು ಎಂದರು.
ವಿಚಾರಗೋಷ್ಠಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ತ.ನ.ಪ್ರಭುದೇವ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾಮಹದೇವ, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಡಿ.ವಿ.ಅಶ್ವತ್ಥ್ಪ್ಪ, ರಾಜ್ಯ ರೈತ ಸಂಘದ ಮುಖಂಡ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಆಂಜಿನೇಯರೆಡ್ಡಿ, ಕನ್ನಡಪರ ಹೋರಾಟಗಾರ ಚೌಡರಾಜ್ ಇದ್ದರು.