Advertisement

ದಕ್ಷಿಣ ವಿಭಾಗದಲ್ಲಿ 22 ಕಳ್ಳರ ಬಂಧನ

06:54 AM Mar 23, 2019 | Team Udayavani |

ಬೆಂಗಳೂರು: ದ್ವಿಚಕ್ರ ವಾಹನ, ಗಾಂಜಾ ಮಾರಾಟ, ವಿದ್ಯುತ್‌ ಉಪಕರಣಗಳ ಕಳವು ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 22 ಮಂದಿಯನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು 64 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಆರೋಪಿಗಳಿಂದ 61 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನಗಳು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಟೊಮೇಟೋ ಗ್ಯಾಂಗ್‌ ಬಂಧನ: ಕಳವು ಮಾಡುತ್ತಿದ್ದ ದ್ವಿಚಕ್ರ ವಾಹನ, ಕಾರುಗಳನ್ನು ಟೊಮ್ಯಾಟೋ ಲಾರಿಗಳಲ್ಲಿ ಸಾಗಾಟ ಮಾಡುತ್ತಿದ್ದ ಏಳು ಮಂದಿಯ ಖತರ್ನಾಕ್‌ ತಂಡವನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಪ್ರವೀಣ್‌ (21), ಸೈಯದ್‌ ಸಲೀಂ (26), ನವಾಜ್‌ (23), ನಯಾಜ್‌ (25), ಗಿರೀಶ್‌ (21), ಕಾರ್ತಿಕ್‌ (21) ಬಂಧಿತರು.

ಆರೋಪಿಗಳಿಂದ 19 ಲಕ್ಷ ರೂ. ಮೌಲ್ಯದ ಒಂದು ಕಾರು, 25 ದ್ವಿಚಕ್ರ ವಾಹನಗಳು, ಒಂದು ಆಟೋ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ದ್ವಿಚಕ್ರ ಮಾತ್ರವಲ್ಲದೆ, ಆಟೋ, ಕಾರುಗಳನ್ನು ಕಳವು ಲಾರಿಗಳ ಮೂಲಕ  ಬೇರೆಡೆ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಚಿಕ್ಕಬಳ್ಳಾಪುರ ಹಾಗೂ ಅಕ್ಕ-ಪಕ್ಕದ ಜಿಲ್ಲೆಗಳಿಂದ ಬೆಂಗಳೂರಿಗೆ ಟೊಮೇಟೋ ಸಾಗಾಟ ಮಾಡುವ ಲಾರಿ ಮಾಲೀಕರನ್ನು ಸೆಕೆಂಡ್‌ ಹ್ಯಾಂಡಲ್‌ ವಾಹನ ಮಾರಾಟಗಾರರು ಎಂದು ಪರಿಚಯಿಸಿಕೊಂಡಿದ್ದ ಆರೋಪಿಗಳು, ನಸುಕಿನಲ್ಲಿ ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನ, ಕಾರುಗಳು, ಆಟೋಗಳ ಲಾಕ್‌ಗಳನ್ನು ಮುರಿದು ಕಳವು ಮಾಡುತ್ತಿದ್ದರು. ನಂತರ ಒಂದೆಡೆ ಪಾರ್ಕಿಂಗ್‌ ಮಾಡಿ, ಟೊಮೇಟೋ ಲಾರಿಗಳ ಮೂಲಕ ಚಿಕ್ಕಬಳ್ಳಾಪುರ, ಕೋಲಾರ, ಆಂಧ್ರಪ್ರದೇಶಕ್ಕೆ ಸಾಗಾಟ ಮಾಡುತ್ತಿದ್ದರು.

ಇತ್ತೀಚೆಗೆ ಆರೋಪಿಗಳ ತಂಡ ಒಂದು ಸ್ಕಾರ್ಪಿಯೋ ಕಾರು, ಒಂಭತ್ತು ದ್ವಿಚಕ್ರ ವಾಹನಗಳು, ಒಂದು ಆಟೋ ಕಳವು ಮಾಡಿತ್ತು. ಘಟನಾ ಸ್ಥಳಗಳಲ್ಲಿ ದೊರೆತ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೋಜಿನ ಜೀವನಕ್ಕಾಗಿ ಕೃತ್ಯ ಎಸಗುತ್ತಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

ಅಕೌಂಟೆಂಟ್‌ ಬಂಧನ: ಆಯಿಲ್‌ ಕಾರ್ಖಾನೆಯೊಂದರಲ್ಲಿ 2.50 ಲಕ್ಷ ಕಳವು ಮಾಡಿದ್ದ ಅಕೌಂಟೆಂಟ್‌ನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಚೇತನ್‌ ಕುಮಾರ್‌(21) ಬಂಧಿತ. ಕುಮಾರಸ್ವಾಮಿ ಲೇಔಟ್‌ ನಿವಾಸಿ ನಾಗೇಶ್‌ ಎಂಬುವರ ಆಯಿಲ್‌ ಕಾರ್ಖಾನೆಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಚೇತನ್‌ ಕುಮಾರ್‌,

ಫೆ.2ರಂದು ಸುಳ್ಳು ಲೆಕ್ಕ ಸೃಷ್ಟಿಸಿ ಕಂಪೆನಿಯ ಖಾತೆಯಿಂದ 2.5 ಲಕ್ಷ ರೂ. ಹಣ ಕಳವು ಮಾಡಿದ್ದ. ಈ ಸಂಬಂಧ ನಾಗೇಶ್‌ ಅವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 1.52 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಗಾಂಜಾ ಮಾರಾಟ-ಮಹಿಳೆ ಬಂಧನ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕುಮಾರಸ್ವಾಮಿ ಲೇಔಟ್‌ ಅಬಿದಾ(56) ಬಂಧಿತೆ. ಆರೋಪಿಯಿಂದ ಒಂದು ಕಾರು, 700 ಗ್ರಾಂ. ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ತಲ್ಲಘಟ್ಟಪುರ ಠಾಣೆ: ಮನೆಗಳ್ಳತನ, ದ್ವಿಚಕ್ರ ವಾಹನ ಕಳವು, ವಿದ್ಯುತ್‌ ಉಪಕರಣಗಳನ್ನು ಕಳವು ಮಾಡುತ್ತಿದ್ದ ಒಂಬತ್ತು ಮಂದಿಯನ್ನು ತಲ್ಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ. ಸುರೇಶ್‌ (24), ಮೋಹನ್‌ ಕುಮಾರ್‌(27), ಅಯೂಬ್‌ ಖಾನ್‌(25), ಡೇವಿಡ್‌(33), ಪ್ರಶಾಂತ್‌(22), ರಾಜ ಅಲಿಯಾಸ್‌ ಜಪಾನ್‌ ರಾಜ(40), ಲೋಕೇಶ್‌(25), ಗಿರಿಭೋವಿ(32), ಕಿರಣ್‌(21) ಬಂಧಿತರು. ಆರೋಪಿಗಳಿಂದ 30 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ವಿದ್ಯುತ್‌ ಉಪಕರಣಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ದ್ವಿಚಕ್ರ ವಾಹನ ಕಳ್ಳರ ಬಂಧನ: ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಸುಬ್ರಹ್ಮಣ್ಯಪುರ, ಕೋಣನಕುಂಟೆ ಹಾಗೂ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಯವರ್ಧನ್‌(19), ಕಲ್ಯಾಣಕುಮಾರ್‌(19), ಅಭಿಷೇಕ್‌(21), ಅಜಯ್‌(21), ಪ್ರವೀಣ್‌ ಕುಮಾರ್‌(29), ಶಿವಕುಮಾರ್‌ (28) ಬಂಧಿತರು. ಆರೋಪಿಗಳಿಂದ  10.25 ಲಕ್ಷರೂ. ಮೌಲ್ಯದ 10 ದ್ವಿಚಕ್ರ ವಾಹನಗಳು, ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next