ನವದೆಹಲಿ:ಜಗತ್ತಿನಲ್ಲಿ ದೆಹಲಿ ನಂ.1 ಮಲಿನ ರಾಜಧಾನಿಯಾಗಿದೆ ಎಂದು 2020ರ ಜಾಗತಿಕ ವಾಯುಗುಣಮಟ್ಟ ವರದಿ ತಿಳಿಸಿದ್ದು, ಇದರಲ್ಲಿ ಜಗತ್ತಿನ 30 ಅತಿ ಮಲಿನ ನಗರಗಳ ಪೈಕಿ ಭಾರತದಲ್ಲೇ 22 ನಗರಗಳಿರುವುದಾಗಿ ನೂತನ ಸಮೀಕ್ಷಾ ವರದಿ ಹೇಳಿದೆ.
ಸ್ವಿಜರ್ ಲೆಂಡ್ ನ ಐಕ್ಯೂ ಏರ್ ಸಂಸ್ಥೆ ಬಿಡುಗಡೆಗೊಳಿಸಿರುವ ಜಾಗತಿಕ ವಾಯು ಗುಣಮಟ್ಟ ವರದಿ-2020ರ ಪ್ರಕಾರ, ವಾಣಿಜ್ಯ ನಗರಿ ದೆಹಲಿ ಅತ್ಯಂತ ಮಲಿನ ನಗರವಾಗಿದ್ದು, 2019ರಿಂದ 2020ರವರೆಗೆ ದೆಹಲಿಯ ವಾಯುಗುಣಮಟ್ಟ ಅಂದಾಜು ಶೇ.15ರಷ್ಟು ಸುಧಾರಣೆಯಾಗಿರುವುದಾಗಿ ತಿಳಿಸಿದೆ.
ವರದಿಯ ಪ್ರಕಾರ, ವಾಯು ಗುಣಮಟ್ಟದ ಸುಧಾರಣೆಯ ಜತೆಗೆ ದೆಹಲಿ ಅತೀ ಮಲಿನ ನಗರಿಯಲ್ಲಿ 10ನೇ ಸ್ಥಾನ ಪಡೆದಿದ್ದು, ಜಗತ್ತಿನಲ್ಲಿ ನಂ.1 ಮಲಿನ ನಗರಿ ಸ್ಥಾನ ಪಡೆದಿರುವುದಾಗಿ ವಿವರಿಸಿದೆ. 2019ರ ಪಟ್ಟಿಯಲ್ಲಿ ದೆಹಲಿ ಜಗತ್ತಿನ 5ನೇ ಅತೀ ಮಲಿನ ನಗರವಾಗಿತ್ತು.
ಜಗತ್ತಿನ 30 ಮಲಿನ ನಗರಗಳ ಪಟ್ಟಿಯಲ್ಲಿ ಭಾರತದ 22 ಮಲಿನ ನಗರಗಳ ಪೈಕಿ ದಕ್ಷಿಣ ಭಾರತದ ಯಾವ ನಗರಗಳೂ ಇಲ್ಲ. ಇನ್ನುಳಿದಂತೆ ದೆಹಲಿ ಹೊರತುಪಡಿಸಿ ಜಗತ್ತಿನಲ್ಲಿ ಗಾಜಿಯಾಬಾದ್, ಬುಲಂದಶಹರ್, ಬಿಸ್ ರಾಖ್ ಜಲಾಲ್ ಪುರ್, ನೋಯ್ಡಾ, ಗ್ರೇಟರ್ ನೋಯ್ಡಾ, ಕಾನ್ಪುರ್, ಲಕ್ನೋ, ಮೀರತ್ , ಆಗ್ರಾ ಮತ್ತು ಮುಜಾಫರ್ ನಗರ, ರಾಜಸ್ಥಾನದ ಭಿವಾರಿ, ಫರಿದಾಬಾದ್, ಜಿಂದ್, ಹಿಸಾರ್, ಫತೆಹಾಬಾದ್, ಬಂದಾವಾರಿ, ಗುರ್ಗಾಮ್, ಯಮುನಾ ನಗರ್, ರೋಹ್ಟಕ್, ಹರ್ಯಾಣದ ಧಾರುಹೇರಾ, ಬಿಹಾರದ ಮುಜಾಫರ್ ಪುರ್ ಮಲಿನ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ವರದಿಯ ಪ್ರಕಾರ ಜಗತ್ತಿನ 5 ಅತೀ ಮಲಿನ ನಗರಗಳು ಯಾವುದೆಂದರೆ ಚೀನಾದ ಕ್ಸಿನ್ ಜಿಯಾಂಗ್, ಗಾಜಿಯಾಬಾದ್, ಬುಲಂದ್ ಶಹರ್, ಬಿಸ್ರಖ್ ಜಲಾಲ್ಪುರ್, ನೋಯ್ಡಾ.
ಅದೇ ರೀತಿ ಜಗತ್ತಿನ ಅತೀ ಮಲಿನ ದೇಶಗಳ ಪೈಕಿ ಬಾಂಗ್ಲಾದೇಶ, ಪಾಕಿಸ್ತಾನ, ಭಾರತ, ಮಂಗೋಲಿಯಾ ಮತ್ತು ಅಫ್ಘಾನಿಸ್ತಾನ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಾಗಿ ವರದಿ ತಿಳಿಸಿದೆ.