ಬೆಂಗಳೂರು: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆಲಸ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ 22 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಅಳ್ಳಾಳಸಂದ್ರ ನಿವಾಸಿ ಬಿ.ಟಿ.ಪುಷ್ಪಲತಾ ಎಂಬವರು ನೀಡಿದ ದೂರಿನ ಮೇರೆಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಡಿ.ಸಿ.ಮಂಜೇಗೌಡ(55) ಎಂಬವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಸಂಜಯನಗರ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಫೆಬ್ರವರಿಯಲ್ಲಿ 2017ರಲ್ಲಿ ಪುಷ್ಪಲತಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹುದ್ದೆಗೆ ಪುಷ್ಪಲತಾ ಅರ್ಜಿ ಸಲ್ಲಿಸಿದ್ದರು. ಈ ವಿಚಾರವನ್ನು ಪುಷ್ಪಲತಾ ತಂದೆ ತಮ್ಮ ದೂರದ ಸಂಬಂಧಿ ಆರೋಪಿ ಮಂಜೇಗೌಡರಿಗೆ ತಿಳಿಸಿ, ತಮ್ಮ ಪುತ್ರಿಗೆ ಕೃಷಿ ಇಲಾಖೆಯಲ್ಲಿ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದರು. ಆ ವೇಳೆ ಆರೋಪಿ ತನಗೆ ರಾಜಕೀಯ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳ ಪರಿಚಯವಿದ್ದು, ಪರೀಕ್ಷೆ ಬರೆದು ನಂತರ ಕರೆ ಮಾಡುವಂತೆ ಹೇಳಿ, 25 ಲಕ್ಷ ರೂ. ಕೊಟ್ಟರೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಪುಷ್ಪಲತಾ ಹಣದ ವಿಚಾರವನ್ನು ತಮ್ಮ ತಂದೆ ಜತೆ ಮಾತನಾಡುವಂತೆ ಹೇಳಿದ್ದರು. ಆಗ ಆರೋಪಿ, ‘ನಿಮ್ಮ ತಂದೆಗೆ ಎಲ್ಲ ವಿಚಾರವನ್ನು ತಿಳಿಸಿದ್ದು, ಅವರೊಂದಿಗೇ ಬೆಂಗಳೂರಿಗೆ ಬಂದು ಮಾತನಾಡುತ್ತೇನೆ’ ಎಂದಿದ್ದರು ಎಂದು ಪುಷ್ಪಲತಾ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಗೆ ಮುಂಗಡ ಹಣ 10 ಲಕ್ಷ ರೂ. ಹಾಗೂ ನಂತರ 2017 ಸೆ.6ರಂದು ಮತ್ತೂಮ್ಮೆ ಹತ್ತು ಲಕ್ಷ ರೂ. ಕೊಡಲಾಗಿತ್ತು. ಅ. 3ರಂದು ಇನ್ನುಳಿದ ಎರಡು ಲಕ್ಷ ರೂ. ಕೊಟ್ಟಿದ್ದೇವೆ. ಆದರೆ, 2017ರ ನವೆಂಬರ್‌ನಲ್ಲಿ ಪರೀಕ್ಷೆಯ ಫಲಿತಾಂಶ ಬಂದಿದ್ದು, ಆದರೆ, ಇಲಾಖೆಗೆ ಆಯ್ಕೆಯಾಗಲಿಲ್ಲ. ಈ ಸಂಬಂಧ ಆರೋಪಿ ಬಳಿ ಪ್ರಶ್ನಿಸಿದಾಗ ಈಗಾಗಲೇ ಸಂಬಂಧಿಸಿದ ವ್ಯಕ್ತಿಗಳಿಗೆ ಹಣ ಕೊಡಲಾಗಿತ್ತು. ಆದರೂ ಕೆಲಸ ಆಗಿಲ್ಲ. ಹೀಗಾಗಿ ಮೂರು ತಿಂಗಳಲ್ಲಿ ಹಣ ವಾಪಸ್ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಆರೋಪಿ ಇದುವರೆಗೂ ಹಣ ವಾಪಸ್ ಕೊಟ್ಟಿಲ್ಲ. ಹೀಗಾಗಿ ಆರೋಪಿ ಡಿ.ಸಿ.ಮಂಜೇಗೌಡ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಪುಷ್ಪಲತಾ ದೂರಿನಲ್ಲಿ ಕೋರಿದ್ದಾರೆ ಎಂದು ಸಂಜಯನಗರ ಪೊಲೀಸರು ಹೇಳಿದರು.