Advertisement

22 ಲಕ್ಷ ಎಕ್ರೆ ವಿಸ್ತಾರದ ಯೆಲ್ಲೋ ಸ್ಟೋನ್‌! :ಅಮೆರಿಕದ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವನ

06:26 PM May 29, 2024 | Team Udayavani |

ವಯೋಮಿಂಗ್‌, ಮೋಂಟಾನಾ, ಐಡಾಹೋ ಈ ಮೂರು ರಾಜ್ಯಗಳಲ್ಲಿ ಹಬ್ಬಿರುವ, ಇಪ್ಪತ್ತೆರಡು ಲಕ್ಷ ಎಕ್ರೆಗಳಷ್ಟು ವಿಸ್ತಾರವನ್ನು ಹೊಂದಿರುವ ಬೃಹತ್ತಾದ ನ್ಯಾಶನಲ್‌ ಪಾರ್ಕ್‌ ಈ ಯೆಲ್ಲೋ ಸ್ಟೋನ್‌! ಈ ಅಂಕಿಸಂಖ್ಯೆಯ ಆಧಾರದ ಮೇಲೆ ಈ ಪಾರ್ಕ್‌ನ ಅಗಾಧತೆಯನ್ನು ಊಹಿಸಿಕೊಳ್ಳಬಹುದು ನೀವು. ಅದಕ್ಕೆಂದೇ ಇದು ಅಮೆರಿಕದ ರಾಷ್ಟ್ರೀಯ ಉದ್ಯಾನವನಗಳ ಪಟ್ಟಿಯಲ್ಲಿ ವಿಸ್ತೀರ್ಣತೆಯ ಆಧಾರದ ಮೇಲೂ ಮತ್ತು ಜನಪ್ರಿಯತೆಯ ಆಧಾರದ ಮೇಲೂ ಮೊದಲನೇ ಸ್ಥಾನದಲ್ಲಿ ಬರುತ್ತದೆ. ಇಲ್ಲಿರುವ ನಯನ ಮನೋಹರವಾದ ಜಲಪಾತಗಳು, ಸಾಲು ಪರ್ವತಗಳು, ಬೃಹತ್ತಾದ ಕಣಿವೆಗಳು, ಮೈದುಂಬಿ ಹರಿಯುವ ನದಿಗಳಿಂದ ಇಡೀ ಕಾಡು ಪ್ರಕೃತಿಯ ವಿಸ್ಮಯಗಳಿಂದ, ನೈಸರ್ಗಿಕ ಚಿತ್ತಾರಗಳಿಂದ ತುಂಬಿ ಹೋಗಿದೆ.

Advertisement

ಪಕ್ಷಿ ವೀಕ್ಷಕರಿಗೆ, ಬೆಟ್ಟ-ಗುಡ್ಡಗಳನ್ನು ಹತ್ತಿ ಟ್ರೆಕ್ಕಿಂಗ್‌ ಮಾಡುವವರಿಗೆ, ಮೈಲುಗಟ್ಟಲೇ ನಡೆಯುವ ಹೈಕಿಂಗ್‌ ಪ್ರಿಯರಿಗೆ, ಚೆಂದನೆಯ ಜಾಗಗಳನ್ನು ನೋಡಿ ಮೆಚ್ಚುವ ಇನ್‌ಸ್ಟಾ ಪ್ರೇಮಿಗಳಿಗೆ, ಬಗೆಬಗೆಯ ಪ್ರಾಣಿ-ಪಕ್ಷಿ-ಸಸ್ಯ-ಕೀಟಗಳನ್ನು ನೋಡಿ ಬೆರಗುಗೊಳ್ಳುವ ಮಕ್ಕಳಿಗೆ ಹೀಗೆ ಎಲ್ಲ ತಲೆಮಾರಿನವರಿಗೆ, ಭಿನ್ನವಾದ ಆಸಕ್ತಿಗಳನ್ನು ಹೊಂದಿರುವವರಿಗೆ ಇದು ಮೆಚ್ಚುವಂತಹ ತಾಣವಾಗುತ್ತದಾದ್ದರಿಂದ ಪ್ರತೀ ವರ್ಷ ಲಕ್ಷಗಟ್ಟಲೇ ಪ್ರವಾಸಿಗರು ಭೇಟಿ ನೀಡುತ್ತಾರೆ.

ಇಷ್ಟೇ ಅಲ್ಲ….ಯೆಲ್ಲೋ ಸ್ಟೋನ್‌ ಜ್ವಾಲಾಮುಖಿಗಳಿಗೆ ಹೆಸರಾಗಿದೆ. ನಾರ್ತ್‌ ಅಮೆರಿಕದ ಅತೀ ದೊಡ್ಡ ಜ್ವಾಲಾಮುಖಿ(VEI&8) ಇಲ್ಲಿ ದಾಖಲಾಗಿದೆ! ಈಗಲೂ ಸಕ್ರಿಯವಾಗಿರುವ ಈ ಜ್ವಾಲಾಮುಖಿಯ ಕಾರಣದಿಂದ ಇಲ್ಲಿ ಹಲವಾರು ಜ್ವಾಲಾಮುಖಿ ಕುಂಡಗಳನ್ನು ಕಾಣಬಹುದು. ಇದಲ್ಲದೇ ಹತ್ತಾರು ಬಿಸಿನೀರಿನ ಬುಗ್ಗೆಗಳಿವೆ! ಅಂದರೆ ಕುಂಡಗಳಲ್ಲಿ ಕುದಿಯುತ್ತಿರುವ ನೀರು! ಗ್ರಾಂಡ್‌ ಪ್ರಿಸ್ಮಾಟಿಕ್‌ ಸ್ಪ್ರಿಂಗ್‌ ಎಂಬ ಈ ಪ್ರಸಿದ್ಧವಾದ ಬಿಸಿನೀರಿನ ಬುಗ್ಗೆ (ಹಾಟ್‌ ಸ್ಪ್ರಿಂಗ್‌) ಹಲವಾರು ಬಣ್ಣಗಳನ್ನು ಹೊಂದಿದ್ದು, ದೊಡ್ಡದಾದ ಕೆರೆಯೊಂದರ ಮೇಲೆ ಗಾಢ ಬಣ್ಣಗಳನ್ನು ತುಂಬಿದ ರಂಗೋಲಿ ಬಿಡಿಸಿದಂತೆ ಕಾಣಿಸುತ್ತದೆ. ಹಾಗಂತ ಹತ್ತಿರ ಹೋದಿರೋ ಜೋಪಾನ!

ನೀರು ಕುದಿಯುತ್ತಿರುವ ಶಬ್ದ ಬಹಳ ಸ್ಪಷ್ಟವಾಗಿ ಕೇಳಿಸುವ, ಹತ್ತಿರ ಹೋದರೆ ಬಿಸಿನೀರಿನ ಹೊಗೆ ಹಾಯುವ ಈ ಕುಂಡದ ಮುಂದೆ ಚೆಲ್ಲಾಟಗಳಿಗೆ ಅವಕಾಶವಿಲ್ಲ. ಇದು ಎಷ್ಟು ದೊಡ್ಡದಾಗಿದೆಯೆಂದರೆ ದೂರದಲ್ಲಿರುವ ಮುಖ್ಯ ರಸ್ತೆಯಿಂದಲೇ ಬಣ್ಣಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಇಂತಹ ಅದೆಷ್ಟೋ ಸಣ್ಣ ಪುಟ್ಟ ಬಿಸಿನೀರಿನ ಕುಂಡಗಳು ಇಡೀ ಯೆಲ್ಲೋ ಸ್ಟೋನ್‌ ಸುತ್ತ ಕಾಣಸಿಗುತ್ತವೆ.

ಜತೆಗೆ ಆಕಾಶವನ್ನು ಚುಂಬಿಸುವಂತೆ ಚಿಮ್ಮುವ ಬಿಸಿನೀರಿನ ಚಿಲುಮೆಗಳು. ಮನೆಯಲ್ಲಿರುವ ಗೀಸರ್‌ನಲ್ಲಿಯೂ ಸಹ ಇಷ್ಟು ಜೋರಾದ ಬಿಸಿನೀರು ಬರುವುದಿಲ್ಲ. ಅಷ್ಟು ಶರವೇಗದಲ್ಲಿ ಚಿಮ್ಮುವ ನೀರು ಸುತ್ತಲಿನ ವಾತಾವರಣವನ್ನು ಬೆಚ್ಚಗೆ ಮಾಡುತ್ತದೆ. ಸುಮಾರು ಅರ್ಧ ಗಂಟೆಯಿಂದ ಎರಡು ಗಂಟೆಯ ಅವಧಿಯಲ್ಲಿ ತಂತಾನೇ ಚಿಮ್ಮುವ ಒಲ್ಡ್‌ ಫೆತಫುಲ್‌ ಗೀಸರ್‌ ಮುಂದೆ ಜನ ಬಹಳ ಫೆತ್‌ ಇಟ್ಟುಕೊಂಡು ಕಾಯುತ್ತಿರುತ್ತಾರೆ. ಅವರ ನಂಬಿಕೆಯನ್ನು ಹುಸಿಗೊಳಿಸದೇ ಒಲ್ಡ್‌ ಫೆತಫುಲ್‌ ಚಿಮ್ಮುತ್ತದೆ.

Advertisement

ಇಂತಹ ಅನೇಕ ಗೀಸರ್‌ ಮತ್ತು ನೈಸರ್ಗಿಕವಾದ ಹೈಡ್ರೋ ಥರ್ಮಲ್‌ ಗಳು ಯೆಲ್ಲೋ ಸ್ಟೋನ್‌ನಲ್ಲಿ ಕಾಣಿಸುತ್ತವೆ.
ಮತ್ತೊಂದು ಪ್ರಸಿದ್ಧವಾದ ಆಕರ್ಷಣೆಯ ಬಗ್ಗೆ ಹೇಳಲೇಬೇಕು! ಇಲ್ಲಿರುವ ಕಾಡೆಮ್ಮೆಗಳು! ಬೈಸನ್‌ ಎಂದು ಕರೆಸಿಕೊಳ್ಳುವ ದೈತ್ಯ ಗಾತ್ರದ ಎಮ್ಮೆಗಳು ಇಡೀ ಪಾರ್ಕ್‌ನ ತುಂಬ ಕಾಣಸಿಗುತ್ತವೆ. ಕೆಲವೊಮ್ಮೆ ರಸ್ತೆಯ ಇಕ್ಕೆಲಗಳಲ್ಲಿ ಇನ್ನು ಕೆಲವೊಮ್ಮೆ ರಸ್ತೆಯ ಮಧ್ಯದಲ್ಲಿಯೇ ಗುಂಪುಗಳಲ್ಲಿ ನಿಲ್ಲುವ ಈ ಪ್ರಾಣಿಗಳನ್ನು ನೋಡಲು ಜನ ಬಹು ಉತ್ಸುಕರಾಗಿರುತ್ತಾರೆ. ಅವುಗಳನ್ನು ವಿವಿಧ ಭಂಗಿಯಲ್ಲಿ ಸೆರೆ ಹಿಡಿಯಲು ಯತ್ನಿಸುತ್ತಾರೆ.

ತಾವು ಅವುಗಳ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಯತ್ನಿಸುತ್ತಾರೆ. ಅದೆಷ್ಟು ಹುಚ್ಚೆಂದರೆ ಕೆಲವೊಮ್ಮೆ ಉದ್ದಕ್ಕೆ ಗಾಡಿಗಳು ರಸ್ತೆಯ ಮೇಲೆ ನಿಂತು ಬಿಟ್ಟಿರುತ್ತವೆ. ಎಲ್ಲವೂ ಈ ಕಾಡೆಮ್ಮೆಗಳಿಗಾಗಿ. ಅವುಗಳು ಮಾತ್ರ ಈ ಎಲ್ಲವೂ ತಮಗೆ ಸಲ್ಲಬೇಕಾದದ್ದು ಎಂಬ ಗರ್ವದಲ್ಲಿ ಮನುಷ್ಯನಿಗೆ ಚೂರು ಕಿಮ್ಮತ್ತು ಕೊಡದೇ ತಮ್ಮದೇ ಭಂಗಿಯಲ್ಲಿ, ಠೀವಿಯಲ್ಲಿ ನಡೆಯುತ್ತಿರುತ್ತವೆ.

ಎಲ್ಕ್ ಅಂದರೆ ಸಾರಂಗ ಜಾತಿಯ ಪ್ರಾಣಿಗಳು ಸಹ ಬಹಳ ಕಾಣಿಸುತ್ತವೆ. ನಾವು ಹೋದಾಗ ಎಲ್ಕ್‌ ಗಳ ಒಂದು ದೊಡ್ಡ ದಂಡೇ ನೆರೆದಿತ್ತು. ಅದರಲ್ಲಿ ಒಂದು ಮಾತ್ರ ಇಡೀ ಪಾರ್ಕ್‌ಗೆ ಕೇಳಿಸುವಂತೆ ಜೋರಾಗಿ ಹೇಂಕರಿಸುತ್ತಿತ್ತು. ಯಾಕೆ ಹೀಗೆ ಮಾಡುತ್ತಿದೆ, ಅದಕ್ಕೇನು ಕಷ್ಟವಾಗುತ್ತಿದೆ ಎಂದು ನಾವು ತಲೆ ಕೆಡಿಸಿಕೊಂಡು ಕೂತಿದ್ದೇವು. ನಮ್ಮ ಪಕ್ಕದಲ್ಲಿದ್ದ ಇನ್ನೊಬ್ಬ ಪ್ರವಾಸಿಗ “ಅದು ಗಂಡು, ಸುತ್ತಲಿರುವ ಹುಡುಗಿಯರನ್ನು ಆಕರ್ಷಿಸಲು ಯತ್ನಿಸುತ್ತಿದೆ’ ಎಂದು ಹೇಳಿದ. ಅಲ್ಲಿದ್ದ ಬಾಕಿ ಎಲ್ಲವೂ ಹೆಣ್ಣೇ ಆಗಿದ್ದವು. ಇದರ ಕಡೆಗೆ ತಿರುಗಿಯೂ ನೋಡದೇ ತಮ್ಮ ಲೋಕದಲ್ಲಿ ಮುಳುಗಿದ ಹಾಗೆ ನಟಿಸುತ್ತಿದ್ದವು. ಇದು ಮಾತ್ರ ಒಂದೇ ಸಮನೇ ಕೂಗುತ್ತಿತ್ತು. ತಲೆ ಕೆಟ್ಟು ಒಂದು ಸುತ್ತು ಓಡುತ್ತಿತ್ತು. ಮತ್ತೆ ಹೆಣ್ಣು ಎಲ್ಕ್ ಗಳ ಹಿಂದೆ ಓಡಾಡಿ ಏನಾದರೂ ಕೆಲಸವಾಗುವುದೋ ಎಂದು ಕಾಯುತ್ತಿತ್ತು. ನಾವು ಅಲ್ಲಿರುವ ಸಮಯದ ವರೆಗೂ ಅದಕ್ಕೆ ಒಂದು ಸಂಗಾತಿಯೂ ಸಿಕ್ಕಲಿಲ್ಲ ಎಂಬುದು ವಿಷಾದದ ಸಂಗತಿ. ಆಗಾಗ ಕಾಣಿಸುವ ಕರಡಿಗಳು, ನರಿಗಳ ಜತೆಗೆ ಡಿಸೆಂಬರಿನ ಚಳಿಯ ಸಮಯದಲ್ಲಿ ಹಿಮಕರಡಿಗಳು ಕಾಣಿಸುತ್ತವಂತೆ. ಹೇಡನ್‌ ವ್ಯಾಲಿ ಎಂಬ ಜಾಗದಲ್ಲಿ ಅತ್ಯಧಿಕವಾಗಿ ಕಾಣಿಸುವ ಈ ಬೈಸನ್‌ಗಳು ಮತ್ತು ಇತರ ಪ್ರಾಣಿಗಳು ಈ ಜಾಗವನ್ನು ನೋಡಲೇಬೇಕಾದ ಪಟ್ಟಿಗೆ ಸೇರಿಸಿವೆ.

ಸಾವಿರಾರು ವರ್ಷಗಳ ಹಿಂದೆ ಸಂಭವಿಸಿದ ಹೈಡ್ರೋಥರ್ಮಲ್‌ ಕ್ರಿಯೆಯ ಹುಟ್ಟಿಕೊಂಡಿರುವ ಗ್ರಾಂಡ್‌ ಕ್ಯಾನಿಯಾನ್‌ ಅಂದರೆ ದೈತ್ಯ ಕಣಿವೆ ಯೆಲ್ಲೋ ಸ್ಟೋನ್‌ ಪಾರ್ಕ್‌ನ ಪ್ರಮುಖ ಆಕರ್ಷಣೆ. ಸುಮಾರು ಇಪ್ಪತ್ತು ಮೈಲು ಹಬ್ಬಿರುವ ಈ ಕಣಿವೆಯ ಆಳ 800ರಿಂದ 1,000 ಅಡಿಯಷ್ಟಿದೆ. ಈ ಮಾರ್ಗದಲ್ಲಿ ಯೆಲ್ಲೋ ಸ್ಟೋನ್‌ ನದಿಯಿಂದಾಗಿ ಹುಟ್ಟಿದ ಜಲಪಾತಗಳಾದ 109 ಅಡಿಯ ಅಪ್ಪರ್‌ ಫಾಲ್ಸ್‌, 308 ಅಡಿಯ ಲೋವರ್‌ ಫಾಲ್ಸ್‌ಗಳನ್ನು ನೋಡಬಹುದು. ಈ ಕಣಿವೆಯನ್ನು ನಾರ್ತ್‌ ರಿಮ್‌ ಮತ್ತು ಸೌತ್‌ ರಿಮ್‌ ಎಂಬ ಎರಡು ತಾಣಗಳಿಂದ ವೀಕ್ಷಿಸಬಹುದು. ಹೈಕ್‌ ಮಾಡುವ ಅಭಿರುಚಿಯುಳ್ಳವರು ಇಡೀ ಕಣಿವೆಯಲ್ಲಿ ಅಲ್ಲಲ್ಲಿ ಇರುವ ಟ್ರೈಲ್‌ (ಹೈಕಿಂಗ್‌ ಮಾರ್ಗಗಳು) ಗಳನ್ನು ಸುತ್ತು ಹಾಕಿಕೊಂಡು ಬರಬಹುದು.

ಪ್ರಮುಖ ತಾಣಗಳ ಪಟ್ಟಿಯೇ ಬಹಳ ದೊಡ್ಡದಿದೆ. ಇವುಗಳನ್ನು ಹೊರತು ಪಡಿಸಿ ಸಣ್ಣ ಪುಟ್ಟ ಜಲಪಾತಗಳು, ಗೀಸ ರ್‌ಗಳು, ಹಸುರು ತುಂಬಿಕೊಂಡಿರುವ ಹೈಕಿಂಗ್‌ ಜಾಗಗಳು, ಜಲಪಾತಗಳು, ಹಾಟ್‌ಸ್ಪ್ರಿಂಗ್‌ಗಳನ್ನೆಲ್ಲ ಹೆಸರಿಸುತ್ತ ಹೋದರೆ ಯೆಲ್ಲೋ ಸ್ಟೋನ್‌ ಬಗ್ಗೆಯೇ ಪುಸ್ತಕ ಬರೆಯಬಹುದು (ಅಂತಹ ಪ್ರವಾಸಕ್ಕೆ ಅನುಕೂಲವಾಗುವಂತಹ ಪುಸ್ತಕಗಳು ಬಹಳಷ್ಟಿವೆ). ನಾವು ಅಲ್ಲಿದ್ದ ಒಂದು ರಾತ್ರಿ ಸ್ನೋ ಬಿದ್ದು ಮರುದಿನ ಬೆಳಗ್ಗೆ ಎದ್ದು ಆರ್‌.ವಿ.ಯಿಂದ ಹೊರಬಂದು ನೋಡಿದಾಗ ಬಿಳಿಯ ಲೋಕಕ್ಕೆ ಕಾಲಿಟ್ಟಂತೆ, ದೇವಲೋಕಕ್ಕೆ ಬಂದಿದ್ದೇವೇನೋ ಎಂದೆನ್ನಿಸಿತ್ತು. ಮರಗಳ ತುಂಬೆಲ್ಲ ಹಿಮ ತುಂಬಿಕೊಂಡು ತಣ್ಣನೆಯ ಚಳಿಯ ಮಧ್ಯದಲ್ಲಿ ಆ ಜಾಗ ಬಹಳ ಪರಮಶ್ರೇಷ್ಠವಾಗಿ ಕಂಡಿತ್ತು. ಇಲ್ಲಿಯವರೆಗೆ ನೋಡಿದ ಒಟ್ಟು ಹನ್ನೊಂದು ರಾಷ್ಟ್ರೀಯ ಉದ್ಯಾನವನಗಳ ಪಟ್ಟಿಯಲ್ಲಿ ಯೆಲ್ಲೋ ಸ್ಟೋನ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

*ಸಂಜೋತಾ ಪುರೋಹಿತ್‌

Advertisement

Udayavani is now on Telegram. Click here to join our channel and stay updated with the latest news.

Next