ಗೋಲ್ಘಾಟ್: ಜಿಲ್ಲೆಯಲ್ಲಿ ವಿಷಕಾರಿ ಕಂಟ್ರಿ ಸರಾಯಿ ಸೇವಿಸಿ 22 ಮಂದಿ ಸಾವನ್ನಪ್ಪಿರುವ ದುರಂತ ನಡೆದಿದೆ. ಮದ್ಯ ಸೇವಿಸಿದ ಹಲವು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ.
ಮೃತರಲ್ಲಿ ಹೆಚ್ಚಿನವರು ಗೋಲ್ಘಾಟ್‌ನ ಶಾಲಮಾರ ಪ್ರಾಂತ್ಯದ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ.
ಅಸ್ಸಾಂನ ಅಬಕಾರಿ ಇಲಾಖೆಯ ಪಿಆರ್‌ಒ ಸೈಲೇನ್ ಪಾಂಡೇ ಅವರು 22 ಮಂದಿ ಸಾವನ್ನಪ್ಪಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಇಬ್ಬರು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಗಳಿಗೆ ಮಾನವೀಯ ನೆಲೆಯಲ್ಲಿ ನೆರವು ಒದಗಿಸಲು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಘಟನೆಯ ಬಳಿಕ ಪೊಲೀಸರು ಮತ್ತು ನಾಗರಿಕರ ನಡುವೆ ಘರ್ಷಣೆಯೂ ನಡೆದಿದ್ದು, ಗ್ರಾಮಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಉತ್ತರ ಪ್ರದೇಶ ಮತ್ತು ಉತ್ತಾರಖಂಡದಲ್ಲಿ ವಿಷ ಮದ್ಯ ಸೇವಿಸಿ ನೂರಕ್ಕೂ ಹೆಚ್ಚು ಜನರು ಬಲಿಯಾದ ಬೆನ್ನಲ್ಲೇ ಈ ಘಟನೆ ನಡೆದಿದೆ.